ತೀತನಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ದೇವರ ಸೇವಕನೂ, ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ. 2 ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ. 3 ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ. 4 ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ. ಸಭೆಯ ಹಿರಿಯರಲ್ಲಿ ಇರಬೇಕಾದ ಲಕ್ಷಣಗಳು 5 ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ. 6 ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು. 7 ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ, 8 ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, ಜಿತೇಂದ್ರಿಯನೂ ಆಗಿದ್ದು, 9 ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು. 10 ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ. 11 ಅವರು ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ. 12 “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. 13 ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ, 14 ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು. 15 ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ. 16 ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.