ಜ್ಞಾನೋಕ್ತಿಗಳು 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಜ್ಞಾನ ಮತ್ತು ಅಜ್ಞಾನಗಳ ಆಮಂತ್ರಣ 1 ಜ್ಞಾನವೆಂಬಾಕೆಯು ಏಳು ಕಂಬಗಳನ್ನು ಕಡಿದು, ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. 2 ಆಕೆ ಪಶುಗಳನ್ನು ಕೊಯಿಸಿ ಪಾನದ್ರವ್ಯಗಳೊಡನೆ ದ್ರಾಕ್ಷಾರಸವನ್ನು ಬೆರಸಿ, ಔತಣವನ್ನು ಸಿದ್ಧಪಡಿಸಿದ್ದಾಳೆ. 3 ಆಕೆಯು ತನ್ನ ದಾಸಿಯರನ್ನು ಕಳುಹಿಸಿ, ಪಟ್ಟಣದ ರಾಜಮಾರ್ಗಗಳ ಮುಖ್ಯಸ್ಥಾನಗಳಲ್ಲಿ ಪ್ರಕಟಿಸುತ್ತಾಳೆ. 4 ಆಕೆಯು ಬುದ್ಧಿಹೀನರಿಗೆ, “ಮೂಢನಾಗಿರುವವನು ಈ ಕಡೆಗೆ ತಿರುಗಲಿ, 5 ಬನ್ನಿರಿ, ನಾನು ಬಡಿಸುವ ಆಹಾರವನ್ನು ಉಣ್ಣಿರಿ, ನಾನು ಬೆರೆಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. 6 ಮೂಢರೇ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕಮಾರ್ಗದಲ್ಲಿ ನೆಟ್ಟಗೆ ನಡೆಯಿರಿ” ಎಂದು ಪ್ರಬೋಧಿಸುತ್ತಾಳೆ. 7 ಧರ್ಮನಿಂದಕನನ್ನು ಶಿಕ್ಷಿಸುವವನು ತನ್ನನ್ನು ಅವಮಾನಕ್ಕೆ ಗುರಿಮಾಡಿಕೊಳ್ಳುವನು, ಕೆಟ್ಟವನನ್ನು ಗದರಿಸುವವನಿಗೇ ಕಳಂಕವಾಗುವುದು. 8 ಧರ್ಮನಿಂದಕನನ್ನು ಗದರಿಸಬೇಡ, ನಿನ್ನನ್ನು ಹಗೆಮಾಡುವನು. ಜ್ಞಾನವಂತನನ್ನು ಗದರಿಸಿದರೆ ನಿನ್ನನ್ನು ಪ್ರೀತಿಸುವನು. 9 ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳಿವಳಿಕೆಯನ್ನು ಪಡೆಯುವನು. 10 ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧ ದೇವರ ತಿಳಿವಳಿಕೆಯೇ ವಿವೇಕವು. 11 ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಷ್ಯದ ವರ್ಷಗಳು ವೃದ್ಧಿಯಾಗುವವು. 12 ನೀನು ಜ್ಞಾನವಂತನಾದರೆ ನಿನ್ನ ಜ್ಞಾನವು ನಿನಗೇ ಲಾಭಕರ, ಧರ್ಮನಿಂದಕನಾದರೆ ನೀನೇ ಅದರ ಫಲವನ್ನು ಅನುಭವಿಸುವಿ. 13 ಅಜ್ಞಾನವೆಂಬವಳಾದರೋ ಕೂಗಾಟದವಳು, ಮೂಢಳು, ಏನೂ ತಿಳಿಯದವಳು. 14 ಅವಳು ತನ್ನ ಮನೆಯ ಬಾಗಿಲಿನಲ್ಲಿ, ಪಟ್ಟಣದ ರಾಜಮಾರ್ಗಗಳಲ್ಲಿ ಪೀಠದ ಮೇಲೆ ಕುಳಿತುಕೊಂಡವಳಾಗಿ, 15 ತಮ್ಮ ಮಾರ್ಗವನ್ನು ಹಿಡಿದು, ಹೋಗಿ ಬರುವವರನ್ನು ನೋಡಿ, 16 “ಮೂಢನಾಗಿರುವವನು ಈ ಕಡೆಗೆ ತಿರುಗಲಿ” ಎಂದು ಕೂಗಿ, 17 “ಕದ್ದ ನೀರು ಸಿಹಿಯಾಗಿದೆ, ಗುಟ್ಟಾಗಿ ತಿನ್ನುವ ತಿಂಡಿಯು ರುಚಿಯಾಗಿದೆ” ಎಂದು ಬುದ್ಧಿಹೀನನಿಗೆ ಹೇಳುತ್ತಾಳೆ. 18 ಆ ಮನೆಯು ಪ್ರೇತ ನಿವಾಸವೆಂದೂ ಅವಳ ಅತಿಥಿಗಳು ಅಗಾಧಪಾತಾಳದಲ್ಲಿ ಬಿದ್ದಿರುವರೆಂದೂ ಅವನಿಗೆ ತಿಳಿಯದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.