ಜ್ಞಾನೋಕ್ತಿಗಳು 7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಜಾರಸ್ತ್ರೀಯ ವಿಷಯದಲ್ಲಿ ಎಚ್ಚರಿಕೆ 1 ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ. 2 ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು. 3 ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ. 4 ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ. 5 ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು. 6 ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು 7 ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು. 8 ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, 9 ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು. 10 ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು. 11 ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ; 12 ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು. 13 ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ, 14 “ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ, 15 ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು. 16 ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ. 17 ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ. 18 ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ. 19 ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ. 20 ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು. 21 ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ. 22 ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ, 23 ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. 24 ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ. 25 ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ. 26 ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ. 27 ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.