ಜ್ಞಾನೋಕ್ತಿಗಳು 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಜ್ಞಾನವು ಪರಮೋನ್ನತವಾದದ್ದು 1 ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ, ವಿವೇಕವನ್ನು ಗ್ರಹಿಸುವಂತೆ ಕಿವಿಗೊಡಿರಿ. 2 ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ. 3 ನಾನೂ ನನ್ನ ತಂದೆಗೆ ಅಧೀನನಾದ ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು. 4 ಆಗ ತಂದೆಯು ನನಗೆ ಬೋಧಕನಾಗಿ ಹೀಗೆಂದನು, “ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು. 5 ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ. 6 ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು, ಪ್ರೀತಿಸಿದರೆ, ಅದು ನಿನ್ನನ್ನು ಕಾಯುವುದು. 7 ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ. 8 ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು, ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು. 9 ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನು ಇಟ್ಟು, ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.” 10 ಕಂದಾ, ಗಮನಿಸಿ ನನ್ನ ಮಾತುಗಳನ್ನು ಕೇಳು, ಕೇಳಿದರೆ, ನಿನ್ನ ಜೀವಮಾನದ ವರ್ಷಗಳು ಹೆಚ್ಚುವವು. 11 ನಾನು ಜ್ಞಾನಮಾರ್ಗವನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ನಿನ್ನನ್ನು ನಡೆಸುವೆನು. 12 ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಅಡ್ಡಿಯಾಗುವುದಿಲ್ಲ, ಓಡಿದರೆ ಮುಗ್ಗರಿಸುವುದಿಲ್ಲ. 13 ಸದುಪದೇಶವನ್ನು ಗ್ರಹಿಸಿಕೋ, ಸಡಿಲಬಿಡಬೇಡ, ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು. 14 ದುಷ್ಟರ ಮಾರ್ಗದಲ್ಲಿ ಸೇರಬೇಡ, ಕೆಟ್ಟವರ ದಾರಿಯಲ್ಲಿ ನಡೆಯಬೇಡ. 15 ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ. 16 ಕೇಡುಮಾಡದಿದ್ದರೆ ಅವರಿಗೆ ನಿದ್ರೆಬಾರದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವುದು. 17 ದುಷ್ಟತನವೇ ಅವರ ಆಹಾರ; ಬಲಾತ್ಕಾರವೇ ಅವರ ದ್ರಾಕ್ಷಾರಸ ಪಾನ. 18 ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ. 19 ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವುದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು. 20 ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. 22 ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು. 23 ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು. 24 ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ಕೆಟ್ಟ ನುಡಿಗಳನ್ನು ಬಾಯಿಂದ ದೂರಮಾಡು. 25 ನೆಟ್ಟಗೆ ದೃಷ್ಟಿಸು, ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ. 26 ನೀನು ನಡೆಯುವ ದಾರಿಯನ್ನು ಸಮಮಾಡು, ಆಗ ನಿನ್ನ ಮಾರ್ಗಗಳೆಲ್ಲಾ ದೃಢವಾಗಿರುವವು. 27 ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗಬೇಡ, ನಿನ್ನ ಕಾಲನ್ನು ಕೇಡಿಗೆ ದೂರಮಾಡು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.