ಜ್ಞಾನೋಕ್ತಿಗಳು 30 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಆಗೂರನ ಮಾತುಗಳು 1 ದೈವೋಕ್ತಿ. ಯಾಕೆ ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ, ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು. 2 ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, ಮಾನುಷ ವಿವೇಕವು ನನಗಿಲ್ಲ. 3 ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ. 4 ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು. 5 ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ. 6 ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ. 7 ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು. 8 ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. 9 ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು. 10 ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು. 11 ತಾಯಿಗೆ ಶುಭವನ್ನು ಕೋರದೆ, ತಂದೆಯನ್ನು ಶಪಿಸುವ ಒಂದು ತರದವರು ಉಂಟು. 12 ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು. 13 ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು. 14 ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು. 15 ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. ತೃಪ್ತಿಪಡದವುಗಳು ಮೂರು ಉಂಟು, ಹೌದು, ಸಾಕೆನ್ನದವುಗಳು ನಾಲ್ಕು ಉಂಟು. 16 ಯಾವುವೆಂದರೆ, ಪಾತಾಳ, ಹೆರದ ಗರ್ಭ, ನೀರಿನಿಂದ ತೃಪ್ತಿಪಡದ ಭೂಮಿ, ಸಾಕಾಯಿತೆಂದು ಹೇಳದ ಬೆಂಕಿ, ಇವೇ. 17 ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, ಧಿಕ್ಕರಿಸುವವನ ಕಣ್ಣನ್ನು, ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು. 18 ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು; 19 ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ. 20 ಜಾರಳ ನಡತೆಯು ಹೀಗೆಯೇ ಸರಿ, ಅವಳು ತಿಂದು ಬಾಯಿ ಒರೆಸಿಕೊಂಡು, “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು. 21 ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, ಹೌದು, ನಾಲ್ಕರ ಹೊರೆಯನ್ನು ತಾಳಲಾರದು. 22 ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, ಹೊಟ್ಟೆತುಂಬಿದ ನೀಚನು, 23 ಮದುವೆಯಾದ ಚಂಡಿಯು, ಸವತಿಯಾದ ತೊತ್ತು, ಇವೇ. 24 ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು. 25 ಇರುವೆಗಳು ದುರ್ಬಲಜಾತಿಯಾವಾದರೂ, ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು. 26 ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು. 27 ಮಿಡತೆಗಳಿಗೆ ಅರಸನಿಲ್ಲ, ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು. 28 ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ, ಅದು ಅರಮನೆಗಳಲ್ಲಿ ವಾಸಮಾಡುವುದು. 29 ಗಂಭೀರಾಗಮನದ ಮೂರು ಪ್ರಾಣಿಗಳುಂಟು, ಹೌದು, ಗಂಭೀರಗತಿಯ ನಾಲ್ಕುಂಟು. 30 ಯಾವುದಕ್ಕೂ ಹೆದರಿ ಓರೆಯಾಗದ, ಮೃಗರಾಜನಾದ ಸಿಂಹ, 31 ಹೆಮ್ಮೆಯಿಂದ ನಡೆಯುವ ಹುಂಜ, ಹೋತವು ಸಹ, ಸೈನ್ಯಸಮೇತನಾದ ರಾಜ. 32 ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ. 33 ಹಾಲು ಕಡೆಯುವುದರಿಂದ ಬೆಣ್ಣೆ, ಮೂಗು ಹಿಂಡುವುದರಿಂದ ರಕ್ತ, ಕೋಪಕಲಕುವುದರಿಂದ ಜಗಳ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.