ಜ್ಞಾನೋಕ್ತಿಗಳು 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನಲ್ಲಿ ಭರವಸವಿಡು 1 ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಳ್ಳು. 2 ಅವು ನಿನ್ನ ದಿನಗಳನ್ನು ಹೆಚ್ಚಿಸಿ, ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ, ನಿನಗೆ ಸುಕ್ಷೇಮವನ್ನು ಉಂಟುಮಾಡುವವು. 3 ಪ್ರೀತಿ, ಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ. 4 ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ, ಸಮ್ಮತಿಯನ್ನೂ ಪಡೆದುಕೊಳ್ಳುವಿ. 5 ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. 6 ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. 7 ನೀನೇ ಬುದ್ಧಿವಂತನು ಎಂದೆಣಿಸದೆ, ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು. 8 ಇದರಿಂದ ನಿನ್ನ ದೇಹಕ್ಕೆ ಆರೋಗ್ಯವೂ, ಎಲುಬುಗಳಿಗೆ ಸಾರವೂ ಉಂಟಾಗುವವು. 9 ನಿನ್ನ ಆದಾಯದಿಂದಲೂ, ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು. 10 ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿ ತುಳುಕುವುದು. 11 ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ. 12 ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ. 13 ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. 14 ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ, ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. 15 ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ. 16 ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ, ಘನತೆಯೂ ಉಂಟು. 17 ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ. 18 ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವವೃಕ್ಷವಾಗಿದೆ. ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು. 19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು. 20 ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ. 21 ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. 22 ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು. 23 ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ. 24 ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ. 25 ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ. 26 ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು. 27 ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ. 28 ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ. 29 ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ? 30 ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ. 31 ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. 32 ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು. 33 ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು. 34 ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು. 35 ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು, ಜ್ಞಾನಹೀನರಿಗಾಗುವ ಬಹುಮಾನವು ಅವಮಾನವೇ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.