Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 29 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.

2 ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.

3 ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.

4 ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.

5 ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.

6 ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.

7 ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.

8 ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.

9 ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.

10 ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.

11 ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.

12 ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.

13 ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.

14 ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.

15 ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.

16 ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.

17 ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.

18 ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.

19 ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.

20 ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.

21 ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.

22 ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.

23 ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.

24 ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು, ಆಣೆಯಿಡುವುದನ್ನು ಕೇಳಿದರೂ ಸುಮ್ಮನಿರುವನು.

25 ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ.

26 ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.

27 ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು, ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು