ಜ್ಞಾನೋಕ್ತಿಗಳು 28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು, ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು. 2 ಅಧರ್ಮದಿಂದ ದೇಶದಲ್ಲಿ ಬಹು ನಾಯಕರಿರುವರು, ಜ್ಞಾನಿಗಳೂ, ವಿವೇಕಿಗಳೂ ಆದವರಿಂದ ಧರ್ಮವು ಶಾಶ್ವತವಾಗಿರುವುದು. 3 ಬಡವರನ್ನು ಹಿಂಸಿಸುವ ದರಿದ್ರನು, ಒಂದು ಕಾಳೂ ಉಳಿಯದಂತೆ ಪೈರನ್ನು ಬಡಿಯುವ ಮಳೆಯ ಹಾಗೆ. 4 ಧರ್ಮೋಪದೇಶವನ್ನು ಕೈಕೊಳ್ಳದವರು ದುಷ್ಟರನ್ನು ಹೊಗಳುವರು, ಕೈಕೊಳ್ಳುವವರು ಅವರನ್ನು ಎದುರಿಸುವರು. 5 ಕೆಟ್ಟವರು ನ್ಯಾಯವನ್ನು ಗ್ರಹಿಸರು, ಯೆಹೋವನ ಭಕ್ತರು ಸಮಸ್ತವನ್ನು ಗ್ರಹಿಸುವರು. 6 ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ, ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು. 7 ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು. 8 ಬಡ್ಡಿ ಮತ್ತು ಅನ್ಯಾಯ ಲಾಭದಿಂದ ವೃದ್ಧಿಯಾದ ಆಸ್ತಿಯು ಬಡವರಲ್ಲಿ ಕನಿಕರಪಡುವವನ ಪಾಲಾಗುವುದು. 9 ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ. 10 ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು. 11 ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು. 12 ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು. 13 ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು. 14 ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು. 15 ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ. 16 ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು. 17 ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು. 18 ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು. 19 ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ. 20 ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು. 21 ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು. 22 ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು. 23 ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು. 24 ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು. 25 ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು. 26 ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು. 27 ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು. 28 ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.