Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾಳೆ ಎಂದು ಕೊಚ್ಚಿಕೊಳ್ಳಬೇಡ, ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.

2 ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ, ಆತ್ಮಸ್ತುತಿ ಬೇಡ, ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ.

3 ಕಲ್ಲು ಭಾರ, ಮರಳು ಭಾರ, ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ.

4 ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರಕ್ಕೆ ಎದುರಾಗಿ ಯಾರು ನಿಂತಾರು?

5 ಕಾರ್ಯದಿಂದ ಹೊರಪಡದ ಪ್ರೀತಿಗಿಂತಲೂ, ಬಹಿರಂಗವಾದ ಗದರಿಕೆಯು ಲೇಸು.

6 ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ, ಶತ್ರುವಿನ ಮುದ್ದುಗಳು ಹೇರಳವಾಗಿವೆ.

7 ಹೊಟ್ಟೆತುಂಬಿದವನಿಗೆ ಜೇನುತುಪ್ಪವೂ ಅಸಹ್ಯ, ಹೊಟ್ಟೆ ಹಸಿದವನಿಗೆ ಕಹಿಯೆಲ್ಲಾ ಸಿಹಿ.

8 ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು, ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ.

9 ತೈಲವೂ, ಸುಗಂಧದ್ರವ್ಯಗಳೂ ಹೇಗೋ, ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ.

10 ನಿನಗೂ, ನಿನ್ನ ತಂದೆಗೂ ಮಿತ್ರನಾದವನನ್ನು ಬಿಡಬೇಡ, ನಿನ್ನ ಇಕ್ಕಟ್ಟಿನ ದಿನದಲ್ಲಿ ಅಣ್ಣನ ಮನೆಯನ್ನು ಆಶ್ರಯಿಸದಿರು, ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು.

11 ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಹೃದಯವನ್ನು ಸಂತೋಷಪಡಿಸು, ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವುದು.

12 ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.

13 ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ.

14 ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನು, ಶಪಿಸುವವನೆನಿಸಿಕೊಳ್ಳುವನು.

15 ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, ತಂಟೆಮಾಡುವ ಹೆಂಡತಿ, ಎರಡೂ ಒಂದೇ.

16 ಅವಳನ್ನು ಅಡಗಿಸುವವನು ಗಾಳಿಯನ್ನು ಅಡಗಿಸುವನು, ಅವಳನ್ನು ಹಿಡಿಯುವ ಬಲಗೈ ಜಿಡ್ಡಿನ ವಸ್ತುವನ್ನು ಹಿಡಿಯುವುದು.

17 ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುವುದೋ, ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆಯೇ ಹರಿತಮಾಡುವನು.

18 ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು, ಯಜಮಾನನ ಮಾತಿನಂತೆ ನಡೆಯುವವನು ಸನ್ಮಾನವನ್ನು ಅನುಭವಿಸುವನು.

19 ನೀರು ಮುಖಕ್ಕೆ ಮುಖವನ್ನು ಹೇಗೆ ಪ್ರತಿಬಿಂಬಿಸುತ್ತದೋ, ಹಾಗೆಯೇ ಮನುಷ್ಯನಿಗೆ ಮನುಷ್ಯನ ಹೃದಯವು ತೋರ್ಪಡಿಸುತ್ತದೆ.

20 ಪಾತಾಳಕ್ಕೂ, ನಾಶಲೋಕಕ್ಕೂ ಹೇಗೆ ತೃಪ್ತಿಯಿಲ್ಲವೋ, ಹಾಗೆಯೇ ಮನುಷ್ಯನ ಕಣ್ಣುಗಳಿಗೆ ತೃಪ್ತಿಯಿಲ್ಲ.

21 ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ, ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆಯೇ.

22 ಗೋದಿರವೆಯ ಸಂಗಡ ಮೂರ್ಖನನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿದರೂ, ಮೂರ್ಖತನವು ಅವನಿಂದ ತೊಲಗದು.

23 ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು, ನಿನ್ನ ಮಂದೆಗಳ ಮೇಲೆ ಮನಸ್ಸಿಡು.

24 ಸಂಪತ್ತು ಶಾಶ್ವತವಾಗಿರುವುದಿಲ್ಲವಷ್ಟೆ, ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ?

25 ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆ ಹಸಿಹುಲ್ಲು ತಲೆದೋರುವುದು, ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು.

26 ಕುರಿಗಳಿಂದ ನಿನಗೆ ಉಡುಪಾಗುವುದು, ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು.

27 ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು, ಅದು ನಿನ್ನ ದಾಸಿಯರಿಗೆ ಜೀವನವಾಗುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು