Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಸೊಲೊಮೋನನ ಇನ್ನೂ ಕೆಲವು ಜ್ಞಾನೋಕ್ತಿಗಳು

1 ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು, ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು.

2 ವಿಷಯವನ್ನು ರಹಸ್ಯವಾಗಿಡುವುದು ದೇವರ ಮಹಿಮೆ, ವಿಷಯವನ್ನು ವಿಮರ್ಶೆಮಾಡುವುದು ರಾಜರ ಹಿರಿಮೆ.

3 ಆಕಾಶವು ಉನ್ನತ, ಭೂಮಿಯು ಅಗಾಧ, ರಾಜರ ಹೃದಯವು ಅಗೋಚರ.

4 ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವುದು.

5 ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ, ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವುದು.

6 ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ, ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳಬೇಡ.

7 ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮದಲ್ಲಿ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತಲೂ, “ಇನ್ನೂ ಮೇಲಕ್ಕೆ ಬಾ” ಎಂದು ಕರೆಯಿಸಿಕೊಳ್ಳುವುದು ಲೇಸು.

8 ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ, ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ.

9 ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು, ಒಬ್ಬನ ಗುಟ್ಟನ್ನೂ ಬಯಲುಮಾಡಬೇಡ.

10 ಅದನ್ನು ಕೇಳುವವನು ನಿನ್ನನ್ನು ದೂಷಿಸಾನು, ನಿನಗೆ ಬಂದ ಅಪಕೀರ್ತಿಯು ಹೋಗದು.

11 ಸಮಯೋಚಿತವಾದ ಮಾತುಗಳು ಬೆಳ್ಳಿಯ ಕಟ್ಟಿನಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.

12 ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ, ಅಪರಂಜಿಯ ಆಭರಣಕ್ಕೂ ಸಮಾನ.

13 ಸುಗ್ಗೀಕಾಲದಲ್ಲಿ ಹಿಮದ ಶೀತವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ.

14 ಬರೀ ಗಾಳಿಯ ಮೋಡಗಳು ಹೇಗೋ, ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ.

15 ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, ಮೃದುವಚನವು ಎಲುಬನ್ನು ಮುರಿಯುವುದು.

16 ಜೇನು ಸಿಕ್ಕಿತೋ? ಮಿತವಾಗಿ ತಿನ್ನು, ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ.

17 ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.

18 ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ.

19 ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.

20 ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.

21 ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು,

22 ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.

23 ಉತ್ತರದ ಗಾಳಿ ಮಳೆ ಬರಮಾಡುವುದು, ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.

24 ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.

25 ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.

26 ದುಷ್ಟರಿಂದ ಸೋತ ಶಿಷ್ಟನು, ಹಾಳು ಬಾವಿ ಮತ್ತು ತುಳಿದಾಡಿದ ಒರತೆ.

27 ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವುದು ಮಾನವಲ್ಲ.

28 ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು