Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸಬೇಡ.

2 ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು.

3 ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ,

4 ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ.

5 ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ.

6 ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು.

7 ಜ್ಞಾನವು ಮೂರ್ಖನಿಗೆ ನಿಲುಕದು, ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು.

8 ಕೇಡನ್ನು ಕಲ್ಪಿಸುವವನು, ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು.

9 ಮೂರ್ಖನ ಸಂಕಲ್ಪವು ಪಾಪವೇ, ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ.

10 ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ, ನಿನ್ನ ಬಲವೂ ಇಕ್ಕಟ್ಟೇ.

11 ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು, ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸು.

12 “ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?

13 ಕಂದಾ, ಜೇನು ಚೆನ್ನಾಗಿದೆಯಲ್ಲವೆ, ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಷ್ಟೆ, ಅದನ್ನು ತಿನ್ನು.

14 ಜ್ಞಾನವು ನಿನ್ನ ಆತ್ಮಕ್ಕೆ ಹೀಗೆಯೇ ಇರುವುದೆಂದು ತಿಳಿದುಕೋ, ಅದನ್ನು ಪಡೆದುಕೊಂಡರೆ ಮುಂದೆ ಫಲಕಾಲ ಬರುವುದು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.

15 ದುಷ್ಟನೇ, ಶಿಷ್ಟನ ಮನೆಗೆ ಹೊಂಚುಹಾಕಬೇಡ, ಅವನ ನಿವಾಸವನ್ನು ಸೂರೆಮಾಡಬೇಡ.

16 ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.

17 ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.

18 ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು, ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು.

19 ಕೆಡುಕರ ಮೇಲೆ ಉರಿಗೊಳ್ಳದಿರು, ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡದಿರು.

20 ಕೆಟ್ಟವನಿಗೆ ಶುಭಕಾಲವು ಬಾರದು, ದುಷ್ಟರ ದೀಪವು ಆರಿಯೇ ಹೋಗುವುದು.

21 ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, ತಿರುಗಿಬೀಳುವವರ ಗೊಡವೆಗೆ ಹೋಗಬೇಡ.

22 ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವುದು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು?


ಬೇರೆ ಕೆಲವು ಹೇಳಿಕೆಗಳು

23 ಇವು ಕೂಡ ಜ್ಞಾನಿಗಳ ಮಾತುಗಳು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ.

24 ಯಾವನು ಅಧರ್ಮಿಗೆ, “ನೀನು ಧರ್ಮಾತ್ಮನು” ಎಂದು ಹೇಳುತ್ತಾನೋ, ಅವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು.

25 ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವುದು, ಸುಖಕರವಾದ ಆಶೀರ್ವಾದವೂ ಲಭಿಸುವುದು.

26 ಯಥಾರ್ಥವಾದ ಉತ್ತರವು, ತುಟಿಗೆ ಮುದ್ದು.

27 ನಿನ್ನ ಕೆಲಸದ ಸಾಮಾನುಗಳನ್ನು ಸಿದ್ಧಮಾಡು, ನಂತರ ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.

28 ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ, ಮಾತಿನಿಂದ ಮೋಸಮಾಡಬೇಡ.

29 “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು” ಅಂದುಕೊಳ್ಳಬೇಡ.

30 ಸೋಮಾರಿಯ ಹೊಲದ ಮೇಲೆಯೂ, ಬುದ್ಧಿಹೀನನ ದ್ರಾಕ್ಷಿಯ ತೋಟದ ಮೇಲೆಯೂ ಹಾದು ಹೋದೆನು.

31 ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, ಕಳೆಗಳು ಅದನ್ನು ಮುಚ್ಚಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು.

32 ಆಗ ನಾನು ನೋಡಿ ಆಲೋಚಿಸಿದೆನು, ದೃಷ್ಟಿಸಿ ಶಿಕ್ಷಿತನಾದೆನು.

33 ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?

34 ಬಡತನವು ದಾರಿಗಳ್ಳನ ಹಾಗೂ, ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು