ಜ್ಞಾನೋಕ್ತಿಗಳು 20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ, ಇವುಗಳಿಂದ ದಾರಿತಪ್ಪಿ ಹೋಗುವವನು ಜ್ಞಾನಿಯಲ್ಲ. 2 ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು. 3 ವ್ಯಾಜ್ಯಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು, ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ. 4 ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು? 5 ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು. 6 ಸ್ನೇಹಿತರೆಂದು ಹೇಳಿಕೊಳ್ಳುವವರು ಬಹಳ ಜನರು, ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು? 7 ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು. 8 ರಾಜನು ನ್ಯಾಯಾಸನಾರೂಢನಾಗಿ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು. 9 “ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪವನ್ನು ತೊಳೆದುಕೊಂಡು ನಿರ್ಮಲನಾಗಿದ್ದೇನೆ” ಎಂದು ಯಾರು ಹೇಳಬಲ್ಲರು? 10 ತೂಕದ ಕಲ್ಲನ್ನೂ, ಅಳತೆಯ ಪಾತ್ರೆಯನ್ನೂ ಹೆಚ್ಚಿಸುವುದು, ತಗ್ಗಿಸುವುದು ಇವೆರಡೂ ಯೆಹೋವನಿಗೆ ಅಸಹ್ಯ. 11 ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು. 12 ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ. 13 ನಿದ್ರಾನಿರತನಾಗಿರಬೇಡ! ಬಡವನಾದೀಯೆ, ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ. 14 ಕೊಳ್ಳುವವನು, “ಚೆನ್ನಾಗಿಲ್ಲ, ಚೆನ್ನಾಗಿಲ್ಲ” ಎಂದು ಹೇಳುತ್ತಾನೆ, ಕೊಂಡುಕೊಂಡು ಹೋಗಿ ಹೆಚ್ಚಳಪಡುತ್ತಾನೆ. 15 ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯವಾದ ಆಭರಣ. 16 ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆ ಮಾಡಿಕೋ. 17 ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವುದು. 18 ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು. 19 ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ. 20 ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು. 21 ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು. 22 ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು. 23 ತೂಕದ ಕಲ್ಲನ್ನು ಹೆಚ್ಚಿಸುವುದು, ತಗ್ಗಿಸುವುದು ಯೆಹೋವನಿಗೆ ಅಸಹ್ಯ, ಮೋಸದ ತಕ್ಕಡಿ ಒಳ್ಳೆಯದಲ್ಲ. 24 ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ, ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು? 25 “ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು. 26 ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ, ಅವರನ್ನು ತೂರಿಬಿಡುವನು. 27 ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ, ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ. 28 ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು, ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ. 29 ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ. 30 ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವುದು, ಏಟುಗಳು ಅಂತರಂಗವನ್ನು ಶುದ್ಧಿಮಾಡುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.