Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಕಪಟವಾಗಿ ಮಾತನಾಡುವ ಮೂಢನಿಗಿಂತಲೂ, ನಿರ್ದೋಷಿಯಾಗಿ ನಡೆಯುವ ದರಿದ್ರನೇ ಶ್ರೇಷ್ಠ.

2 ತಿಳಿವಳಿಕೆಯಿಲ್ಲದೆ ಕೋರುವುದು ಯುಕ್ತವಲ್ಲ, ದುಡುಕುವ ಕಾಲು ದಾರಿತಪ್ಪುವುದು.

3 ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು, ಯೆಹೋವನ ಮೇಲೆ ಕುದಿಯುವನು.

4 ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು, ಬಡವನಿಗೆ ಇದ್ದ ಸ್ನೇಹಿತನೂ ದೂರವಾಗುವನು.

5 ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ತಪ್ಪಿಸಿಕೊಳ್ಳನು.

6 ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು, ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ.

7 ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು, ಹೌದು, ಮಿತ್ರರೂ ಅವನಿಗೆ ದೂರವಾಗುವರು. ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು.

8 ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು, ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.

9 ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ಹಾಳಾಗುವನು.

10 ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ, ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ.

11 ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.

12 ರಾಜನ ರೋಷವು ಸಿಂಹದ ಗರ್ಜನೆ, ಅವನ ದಯೆಯು ಪೈರಿನ ಇಬ್ಬನಿ.

13 ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ.

14 ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.

15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು, ಸೋಮಾರಿಯು ಹಸಿವೆಗೊಳ್ಳುವನು.

16 ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು.

17 ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

18 ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ,

19 ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ, ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು.

20 ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.

21 ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ, ಯೆಹೋವನ ಸಂಕಲ್ಪವೇ ಈಡೇರುವುದು.

22 ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ, ಬಡವನಾಗಿರುವುದು ಉತ್ತಮ.

23 ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು.

24 ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು.

25 ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು, ವಿವೇಕಿಯನ್ನು ಗದರಿಸು, ತಾನೇ ತಿಳಿವಳಿಕೆಯನ್ನು ಗ್ರಹಿಸುವನು.

26 ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು, ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು.

27 ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ, ಉಪದೇಶ ಕೇಳುವುದನ್ನೇ ಬಿಟ್ಟುಬಿಡು.

28 ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು, ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವುದು.

29 ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು