ಜ್ಞಾನೋಕ್ತಿಗಳು 18 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ, ಸಮಸ್ತ ಸುಜ್ಞಾನಕ್ಕೂ ರೇಗುವನು. 2 ಮೂಢನಿಗೆ ವಿವೇಕವು ಅನಿಷ್ಟ; ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ. 3 ದುರಾಚಾರವಿದ್ದಲ್ಲಿ ತಾತ್ಸಾರ; ಅವಮಾನವಿದ್ದಲ್ಲಿ ಧಿಕ್ಕಾರ. 4 ಸತ್ಪುರುಷನ ನುಡಿಯು ಆಳವಾದ ನೀರು, ಜ್ಞಾನದ ಬುಗ್ಗೆ, ಹರಿಯುವ ತೊರೆ. 5 ದುಷ್ಟನಿಗೆ ಪ್ರಸನ್ನನಾಗಿ ಶಿಷ್ಟನಿಗೆ ನ್ಯಾಯತಪ್ಪಿಸುವುದು ಅಧರ್ಮ. 6 ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ, ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ. 7 ಜ್ಞಾನಹೀನನಿಗೆ ಬಾಯಿ ನಾಶ, ತುಟಿಗಳು ಪಾಶ. 8 ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, ಹೊಟ್ಟೆಯೊಳಕ್ಕೇ ಇಳಿಯುವವು. 9 ಕೆಲಸಗಳ್ಳನು ಕೆಡುಕನಿಗೆ ತಮ್ಮ. 10 ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು. 11 ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದು, ಎತ್ತರವಾದ ಗೋಡೆಯೆಂದು ಭಾವಿಸಿಕೊಳ್ಳುತ್ತಾನೆ. 12 ಭಂಗಕ್ಕೆ ಮೊದಲು ಗರ್ವದ ಹೃದಯ, ಮಾನಕ್ಕೆ ಮುಂಚೆ ದೀನತೆ. 13 ಗಮನಿಸದೆ ಉತ್ತರಕೊಡುವವನು, ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು. 14 ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು? 15 ವಿವೇಕಿಯ ಹೃದಯವು ತಿಳಿವಳಿಕೆಯನ್ನು ಸಂಪಾದಿಸುವುದು, ಜ್ಞಾನಿಯ ಕಿವಿಯು ತಿಳಿವಳಿಕೆಯನ್ನು ಹುಡುಕುವುದು. 16 ಕಾಣಿಕೆಯು ಅನುಕೂಲತೆಗೂ, ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ. 17 ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು, ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು. 18 ಚೀಟು ಹಾಕುವುದರಿಂದ ವ್ಯಾಜ್ಯಶಮನವೂ, ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು. 19 ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ, ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ. 20 ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು, ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು. 21 ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು, 22 ಪತ್ನಿಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ. 23 ಬಡವನು ಬಿನ್ನೈಸುವನು, ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು. 24 ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ, ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.