Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ, ಸಮಾಧಾನದ ಒಣತುತ್ತೇ ಮೇಲು.

2 ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

3 ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ.

4 ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು, ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು.

5 ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು, ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು.

6 ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ.

7 ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ, ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ.

8 ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ.

9 ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.

10 ಮಂದಮತಿಗೆ ನೂರು ಪೆಟ್ಟು ಹೊಡೆಯುವುದಕ್ಕಿಂತಲೂ, ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.

11 ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು.

12 ಮೂರ್ಖತನದಲ್ಲಿ ಮುಳುಗಿರುವ ಮೂಢನನ್ನು ಎದುರಾಗುವುದಕ್ಕಿಂತಲೂ, ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಎದುರಾಗುವುದು ಲೇಸು.

13 ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡು ತಪ್ಪದು.

14 ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.

15 ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು.

16 ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ.

17 ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.

18 ನೆರೆಯವನಿಗಾಗಿ ಪ್ರಮಾಣಮಾಡಿ ಹೊಣೆಯಾದವನು ಬುದ್ಧಿಹೀನನೇ ಸರಿ.

19 ಪಾಪಪ್ರಿಯನು ಕಲಹಪ್ರಿಯ, ಸೊಕ್ಕಿನಿಂದ ಮಾತನಾಡುವವನು ಕೇಡು ಬರಮಾಡಿಕೊಳ್ಳುವನು.

20 ವಕ್ರ ಹೃದಯನು ಶುಭವನ್ನು ಪಡೆಯನು, ಕೆಟ್ಟ ನಾಲಿಗೆಯವನು ವಿಪತ್ತಿಗೆ ಸಿಕ್ಕಿಬೀಳುವನು.

21 ಮೂರ್ಖನನ್ನು ಹೆತ್ತವರಿಗೆ ವ್ಯಥೆ, ಮೂರ್ಖನ ತಂದೆಗೆ ವ್ಯಸನ.

22 ಹರ್ಷಹೃದಯವು ಒಳ್ಳೆಯ ಔಷಧ, ಕುಗ್ಗಿದ ಮನದಿಂದ ಅನಾರೋಗ್ಯ.

23 ದುಷ್ಟನು ಲಂಚವನ್ನು ಗುಪ್ತವಾಗಿ ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುವನು.

24 ವಿವೇಕಿಗೆ ಜ್ಞಾನವೇ ಗುರಿಯಾಗಿರುವುದು, ಮೂಢನ ದೃಷ್ಟಿಯು ದಿಗಂತಗಳಲ್ಲಿಯೂ ಅಲೆಯುವುದು.

25 ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.

26 ಶಿಷ್ಟನಿಗೆ ದಂಡನೆ ಯುಕ್ತವಲ್ಲ, ಧರ್ಮಿಷ್ಠನಿಗೆ ಪೆಟ್ಟು ಅಧರ್ಮ.

27 ಮಿತವಾಗಿ ಮಾತನಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ.

28 ಮೂಢನು ಕೂಡ ಸುಮ್ಮನಿದ್ದರೆ ಜ್ಞಾನಿಯೆಂತಲೂ, ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು