Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು.

2 ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.

3 ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು.

4 ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ.

5 ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.

6 ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.

7 ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.

8 ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.

9 ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.

10 ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.

11 ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.

12 ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.

13 ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.

14 ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.

15 ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.

16 ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.

17 ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.

18 ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.

19 ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.

20 ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.

21 ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.

22 ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.

23 ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.

24 ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

25 ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.

26 ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.

27 ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.

28 ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.

29 ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.

30 ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.

31 ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.

32 ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.

33 ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು