ಜ್ಞಾನೋಕ್ತಿಗಳು 14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು. 2 ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು, ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು. 3 ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು. 4 ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು. 5 ಸತ್ಯಸಾಕ್ಷಿಯು ಸುಳ್ಳಾಡನು, ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು. 6 ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು, ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು. 7 ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ. 8 ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ, ಮೂಢರ ಮೂರ್ಖತನ ಮೋಸಕರ. 9 ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು. 10 ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ. 11 ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ. 12 ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ. 13 ನಗುವವನಿಗೂ ಮನೋವ್ಯಥೆಯುಂಟು, ಉಲ್ಲಾಸದ ಅಂತ್ಯವು ವ್ಯಾಕುಲವೇ. 14 ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು. 15 ಮೂಢನು ಯಾವ ಮಾತನ್ನಾದರೂ ನಂಬುವನು, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. 16 ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು. 17 ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು. 18 ಮೂರ್ಖರಿಗೆ ಮೂರ್ಖತನವೇ ಸ್ವತ್ತು, ಜಾಣರಿಗೆ ಜ್ಞಾನವೇ ಕಿರೀಟ. 19 ಕೆಟ್ಟವರು ಒಳ್ಳೆಯವರಿಗೆ ಬಾಗುವರು, ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು. 20 ಬಡವನು ನೆರೆಯವನಿಗೂ ಅಸಹ್ಯ, ಧನವಂತನಿಗೆ ಬಹು ಜನ ಮಿತ್ರರು. 21 ನೆರೆಯವನನ್ನು ತಿರಸ್ಕರಿಸುವವನು ದೋಷಿ, ದರಿದ್ರನನ್ನು ಕನಿಕರಿಸುವವನು ಧನ್ಯನು. 22 ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ, ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು. 23 ಶ್ರಮೆಯಿಂದ ಸಮೃದ್ಧಿ, ಹರಟೆಯಿಂದ ಕೊರತೆ. 24 ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು, ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ. 25 ಸತ್ಯಸಾಕ್ಷಿಯು ಪ್ರಾಣರಕ್ಷಕ, ಸುಳ್ಳುಸಾಕ್ಷಿಯು ವಂಚಕ. 26 ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು. 27 ಯೆಹೋವನ ಭಯ ಜೀವದ ಬುಗ್ಗೆ, ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ. 28 ಪ್ರಜೆಗಳ ವೃದ್ಧಿ ರಾಜನ ಮಹಿಮೆ, ಪ್ರಜೆಗಳ ನಾಶ ಪ್ರಭುವಿಗೆ ಭಯ. 29 ದೀರ್ಘಶಾಂತನು ಕೇವಲ ಬುದ್ಧಿವಂತನು, ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು. 30 ಶಾಂತಗುಣವು ದೇಹಕ್ಕೆ ಜೀವಾಧಾರವು, ಕ್ರೋಧವು ಎಲುಬಿಗೆ ಕ್ಷಯವು. 31 ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು. 32 ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, ಶಿಷ್ಟನು ಮರಣಕಾಲದಲ್ಲಿಯೂ ಆಶ್ರಯಹೊಂದುವನು. 33 ವಿವೇಕಿಯ ಹೃದಯ ಜ್ಞಾನಾಶ್ರಯ, ಜ್ಞಾನಹೀನನ ಹೃದಯದಲ್ಲಿ ಅದು ಕಾಣದು. 34 ಪ್ರಜೆಗೆ ಧರ್ಮವು ಉನ್ನತಿ, ಅಧರ್ಮವು ಅವಮಾನ. 35 ಜಾಣನಾದ ಸೇವಕನಿಗೆ ರಾಜನ ಕೃಪೆ, ಮಾನಗೇಡಿಗೆ ರಾಜನ ರೌದ್ರ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.