Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.

2 ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ.

3 ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.

4 ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.

5 ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ.

6 ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು.

7 ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.

8 ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.

9 ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.

10 ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.

11 ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು.

12 ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.

13 ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.

14 ಜ್ಞಾನಿಯ ಬೋಧನೆ ಜೀವದ ಬುಗ್ಗೆ, ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.

15 ಸುಬುದ್ಧಿಯು ದಯಾಸ್ಪದವು, ದ್ರೋಹಿಯ ಮಾರ್ಗವು ನಾಶಕರ.

16 ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು.

17 ಕೆಟ್ಟ ದೂತನು ಕೇಡಿಗೆ ಬೀಳುವನು, ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು.

18 ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, ಗದರಿಕೆಯನ್ನು ಗಮನಿಸುವವನಿಗೆ ಮಾನ.

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.

20 ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟಪಡುವನು.

21 ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು.

22 ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.

23 ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.

24 ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.

25 ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, ದುಷ್ಟನ ಹೊಟ್ಟೆ ಹಸಿದಿರುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು