ಜ್ಞಾನೋಕ್ತಿಗಳು 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ. 2 ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು. 3 ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ. 4 ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ. 5 ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ. 6 ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ. 7 ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು. 8 ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು. 9 ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು. 10 ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ. 11 ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ. 12 ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, ಆದರೆ ಶಿಷ್ಟರ ಬುಡ ಫಲದಾಯಕ. 13 ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. 14 ಬಾಯಿಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನು ಅನುಭವಿಸುವನು, ಅವನ ಕೈಕೆಲಸದ ಫಲವು ಅವನಿಗೆ ಪ್ರಾಪ್ತವಾಗುವುದು. 15 ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು. 16 ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು, ಜಾಣನು ಅವಮಾನವನ್ನು ಮರೆಮಾಡುವನು. 17 ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು. 18 ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು. 19 ಸತ್ಯದ ತುಟಿ ಶಾಶ್ವತ, ಸುಳ್ಳಿನ ನಾಲಿಗೆ ಕ್ಷಣಿಕ. 20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ, ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ. 21 ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು, ದುರ್ಜನರಿಗೆ ಕೇಡು ತುಂಬಿ ತುಳುಕುವುದು. 22 ಸುಳ್ಳುತುಟಿ ಯೆಹೋವನಿಗೆ ಅಸಹ್ಯವಾಗಿವೆ. ಸತ್ಯವಂತರು ಆತನಿಗೆ ಆನಂದ ತರುತ್ತಾರೆ. 23 ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು. 24 ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು. 25 ಕಳವಳವು ಮನಸ್ಸನ್ನು ಕುಗ್ಗಿಸುವುದು, ಕನಿಕರದ ಮಾತು ಅದನ್ನು ಹಿಗ್ಗಿಸುವುದು. 26 ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು. 27 ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು. 28 ಧರ್ಮಮಾರ್ಗದಿಂದ ಜೀವಲಾಭವು, ಆ ಮಾರ್ಗದಲ್ಲಿ ಮರಣವಿಲ್ಲ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.