ಜ್ಞಾನೋಕ್ತಿಗಳು 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದೋಷಿ ಮತ್ತು ನಿರ್ದೋಷಿ 1 ಮೋಸದ ತಕ್ಕಡಿ ಯೆಹೋವನಿಗೆ ಅಸಹ್ಯ, ನ್ಯಾಯದ ತೂಕ ಆತನಿಗೆ ಸಂತೋಷ. 2 ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ, ದೀನತೆಯಲ್ಲಿ ಸುಜ್ಞಾನ. 3 ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ, ವಂಚಕರಿಗೆ ವಕ್ರತೆಯು ನಾಶನ. 4 ಧನವು ಕೋಪದ ದಿನದಲ್ಲಿ ವ್ಯರ್ಥ, ಧರ್ಮವು ಮರಣವಿಮೋಚಕ. 5 ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವುದು, ದುಷ್ಟನು ತನ್ನ ದೋಷದಿಂದಲೇ ಬಿದ್ದುಹೋಗುವನು. 6 ಧರ್ಮವು ಯಥಾರ್ಥವಂತರನ್ನು ಉದ್ಧರಿಸುವುದು, ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು. 7 ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವುದು, ಬಲದ ಮೇಲಣ ನಂಬಿಕೆಯು ಬಿದ್ದುಹೋಗುವುದು. 8 ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು, ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು. 9 ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು, ಶಿಷ್ಟನು ತಿಳಿವಳಿಕೆಯಿಂದ ಉದ್ಧಾರವಾಗುವನು. 10 ಸಜ್ಜನರು ಸುಖಿಗಳಾದರೆ ಪಟ್ಟಣಕ್ಕೆ ಉಲ್ಲಾಸ, ದುರ್ಜನರು ಹಾಳಾದರೆ ಜಯಘೋಷ. 11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವುದು, ಕೆಟ್ಟವರ ಬಾಯಿಂದ ಕೆಡವಲ್ಪಡುವುದು. 12 ನೆರೆಯವನನ್ನು ಹೀನೈಸುವವನು ಬುದ್ಧಿಹೀನನು, ವಿವೇಕಿಯು ಮೌನವಾಗಿರುವನು. 13 ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ನಂಬಿಗಸ್ತನು ಸಂಗತಿಗಳನ್ನು ಗುಪ್ತವಾಗಿಡುವನು. 14 ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವುದು, ಬಹು ಮಂದಿ ಸಮಾಲೋಚಕರು ಇರುವಲ್ಲಿ ಸಂರಕ್ಷಣೆ ಇರುವುದು. 15 ಅನ್ಯನ ಸಾಲಕ್ಕೆ ಹೊಣೆಯಾದರೆ ಹಾನಿ, ಅಪರಿಚಿತನ ಹೊಣೆಗೆ ದೂರವಾದರೆ ನಿರ್ಭಯ. 16 ದಯಾಳುವಾದ ಹೆಂಗಸು ಗೌರವವನ್ನು ಪಡೆಯುವಳು, ಬಲಾತ್ಕಾರಿಗಳು ಧನವನ್ನು ಮಾತ್ರ ಕೂಡಿಸಿಕೊಳ್ಳುವರು. 17 ದಯಾಪರನಿಗೆ ಉಪಕಾರವಾಗುವುದು, ಕ್ರೂರನು ತನ್ನ ಶರೀರವನ್ನು ಹಿಂಸಿಸುವನು. 18 ಅಧರ್ಮಿಯ ಸಂಬಳವು ಮೋಸ, ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು. 19 ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ. 20 ವಕ್ರಹೃದಯರು ಯೆಹೋವನಿಗೆ ಅಸಹ್ಯರು, ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು. 21 ದುಷ್ಟನಿಗೆ ದಂಡನೆ ಖಂಡಿತ, ಶಿಷ್ಟವಂಶಕ್ಕೆ ರಕ್ಷಣೆ. 22 ಹಂದಿಯ ಮೂಗಿಗೆ ಚಿನ್ನದ ಮೂಗುತಿಯು ಹೇಗೋ, ಅವಿವೇಕಳಿಗೆ ಸೌಂದರ್ಯವು ಹಾಗೆ. 23 ಸಜ್ಜನರ ಆಶೆಯು ಮಂಗಳಾಸ್ಪದ, ದುರ್ಜನರ ನಿರೀಕ್ಷೆಯು ರೋಷಾಸ್ಪದ. 24 ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ. 25 ಉದಾರಿಯು ಪುಷ್ಟನಾಗುವನು, ನೀರು ಹಾಯಿಸುವವನಿಗೆ ನೀರು ಸಿಕ್ಕುವುದು. 26 ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ, ಮಾರುವವನ ತಲೆಯ ಮೇಲೆ ಆಶೀರ್ವಾದ. 27 ಧರ್ಮಕ್ಕೆ ಆತುರಪಡುವವನಿಗೆ ದಯೆ, ಕೇಡನ್ನು ಹುಡುಕುವವನಿಗೆ ಕೇಡೇ. 28 ಧನವನ್ನೇ ನಂಬಿದವನು ಬಿದ್ದುಹೋಗುವನು, ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು. 29 ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು, ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು; 30 ಧರ್ಮಾತ್ಮನ ಫಲ ಜೀವವೃಕ್ಷ, ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು. 31 ಶಿಷ್ಟನು ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ, ದುಷ್ಟನೂ, ಪಾಪಿಯೂ ದಂಡನೆಯನ್ನು ಅನುಭವಿಸುವರು ಎಂದು ಹೇಳಬೇಕಾಗಿಲ್ಲ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.