ಜ್ಞಾನೋಕ್ತಿಗಳು 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಸೊಲೊಮೋನನ ಜ್ಞಾನೋಕ್ತಿಗಳು 1 ಜ್ಞಾನಿಯಾದ ಮಗನಿಂದ ತಂದೆಗೆ ಆನಂದ, ಅಜ್ಞಾನಿಯಾದ ಮಗನಿಂದ ತಾಯಿಗೆ ದುಃಖ. 2 ಅನ್ಯಾಯದ ಸಂಪತ್ತು ವ್ಯರ್ಥ, ಧರ್ಮವು ಮೃತ್ಯುವಿನಿಂದ ರಕ್ಷಿಸುವಂತದ್ದು. 3 ಯೆಹೋವನು ನೀತಿವಂತರನ್ನು ಹಸಿವೆಗೊಳಿಸನು, ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ. 4 ಜೋಲುಗೈ ದಾರಿದ್ರ್ಯ, ಚುರುಕು ಕೈ ತರುವುದು ಐಶ್ವರ್ಯ. 5 ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು, ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು. 6 ಶಿಷ್ಟನ ತಲೆ ಆಶೀರ್ವಾದದ ನೆಲೆ, ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ. 7 ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ, ದುಷ್ಟರ ನಾಮವು ನಿರ್ನಾಮಕಾಸ್ಪದ. 8 ಜ್ಞಾನಹೃದಯನು ಆಜ್ಞೆಗಳನ್ನು ಪಾಲಿಸುವನು, ಹರಟೆಯ ಮೂರ್ಖನು ಕೆಡವಲ್ಪಡುವನು. 9 ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು, ವಕ್ರಮಾರ್ಗಿಯು ಬೈಲಿಗೆ ಬೀಳುವನು. 10 ಕಣ್ಣು ಮಿಟಕಿಸುವವನು ಕಷ್ಟಕ್ಕೆ ಕಾರಣನು, ಧೈರ್ಯದಿಂದ ಗದರಿಸುವವನು ಸಮಾಧಾನಕರನು. 11 ಶಿಷ್ಟನ ಬಾಯಿ ಜೀವದ ಬುಗ್ಗೆ, ದುಷ್ಟನ ಬಾಯಲ್ಲಿ ಬಲಾತ್ಕಾರವು ತುಂಬಿ ತುಳುಕುತ್ತದೆ. 12 ದ್ವೇಷವು ಜಗಳಗಳನ್ನೆಬ್ಬಿಸುತ್ತದೆ, ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ. 13 ವಿವೇಕಿಯ ತುಟಿಗಳಿಂದ ಜ್ಞಾನ, ಬುದ್ಧಿಹೀನನ ಬೆನ್ನಿಗೆ ಬೆತ್ತ. 14 ಜ್ಞಾನಿಗಳು ತಿಳಿದ ಸಂಗತಿಯನ್ನು ಹೊರಪಡಿಸುವುದಿಲ್ಲ, ಮೂರ್ಖನ ಭಾಷಣ ನಾಶನಕ್ಕೆ ಸಮೀಪ. 15 ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ, ಬಡವನಿಗೆ ಅವನ ಬಡತನವೇ ನಾಶನ. 16 ಶಿಷ್ಟನ ದುಡಿತ ಜೀವಾಸ್ಪದ, ದುಷ್ಟನ ಆದಾಯ ಪಾಪಾಸ್ಪದ. 17 ಶಿಕ್ಷೆಯನ್ನು ಕೈಕೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು, ಗದರಿಕೆಯನ್ನು ಕೈಕೊಳ್ಳದವನು ಸನ್ಮಾರ್ಗದಿಂದ ತಪ್ಪಿಸುವನು. 18 ಹೊಟ್ಟೆಯಲ್ಲಿ ಹಗೆಯನ್ನಿಟ್ಟುಕೊಂಡವನು ಸುಳ್ಳುಗಾರ, ಚಾಡಿಗಾರನು ಜ್ಞಾನಹೀನ. 19 ಮಾತಾಳಿಗೆ ಪಾಪ ತಪ್ಪದು, ಮೌನಿಯು ವಿವೇಕಿ. 20 ಶಿಷ್ಟರ ನಾಲಿಗೆ ಚೊಕ್ಕ ಬೆಳ್ಳಿ, ದುಷ್ಟನ ಹೃದಯ ಮೌಲ್ಯವಿಲ್ಲದ್ದು. 21 ಶಿಷ್ಟರ ಭಾಷಣ ಬಹುಜನ ಪೋಷಣ, ಬುದ್ಧಿಯ ಕೊರತೆ ಮೂರ್ಖರ ನಾಶನ. 22 ಯೆಹೋವನ ಆಶೀರ್ವಾದವು ಭಾಗ್ಯದಾಯಕವು, ಅದು ವ್ಯಸನವನ್ನು ಸೇರಿಸದು. 23 ಅವಿವೇಕಿಗೆ ಕುಯುಕ್ತಿ ವಿನೋದ ವಿವೇಕಿಗೆ ಜ್ಞಾನ ವಿನೋದ. 24 ದುಷ್ಟನಿಗೆ ಶಂಕಿಸಿದ್ದೇ ಸಂಭವಿಸುವುದು, ಶಿಷ್ಟನಿಗೆ ಇಷ್ಟವು ಲಭಿಸುವುದು. 25 ಬಿರುಗಾಳಿ ಬೀಸಿದರೆ ದುಷ್ಟನು ಎಲ್ಲೋ! ಶಿಷ್ಟನು ಶಾಶ್ವತವಾದ ಕಟ್ಟಡ. 26 ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆ. 27 ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ, ದುಷ್ಟರ ವರ್ಷಗಳು ಅಲ್ಪ. 28 ಶಿಷ್ಟನ ನಂಬಿಕೆಗೆ ಆನಂದವು ಫಲ, ದುಷ್ಟನ ನಿರೀಕ್ಷೆ ನಿಷ್ಫಲ. 29 ಯೆಹೋವನು ಸನ್ಮಾರ್ಗಿಗೆ ಆಶ್ರಯ, ಕೆಡುಕನಿಗೆ ನಾಶನ. 30 ಶಿಷ್ಟರು ಎಂದಿಗೂ ಕದಲರು, ದುಷ್ಟರು ದೇಶದಲ್ಲಿ ನಿಲ್ಲರು. 31 ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, ನೀಚನ ನಾಲಿಗೆ ಕತ್ತರಿಸಲ್ಪಡುವುದು. 32 ಶಿಷ್ಟನ ತುಟಿಯಲ್ಲಿ ಹಿತವಚನ, ದುಷ್ಟನ ಬಾಯಲ್ಲಿ ನೀಚವಚನ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.