Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೂಸಲೇಮಿನ ಶತ್ರುಜನಾಂಗಗಳಿಗೆ ಉಂಟಾಗುವ ದಂಡನೆ

1 ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ. ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ; ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ,

2 ದಮಸ್ಕದ ಪಕ್ಕದಲ್ಲಿನ ಹಮಾತಿನಲ್ಲಿಯೂ ಬಹಳ ಜಾಣರು ಎಂದು ಕೊಚ್ಚಿಕೊಂಡಿರುವ ತೂರ್, ಚೀದೋನ್ ಪಟ್ಟಣಗಳಲ್ಲಿಯೂ ಕಣ್ಣಿಟ್ಟಿದ್ದಾನೆ.

3 ತೂರ್ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ, ಬಂಗಾರವನ್ನು ಬೀದಿಯ ಬದಿಯ ಕಸದ ರಾಶಿಯಂತೆ ಮಾಡಿಕೊಂಡಿದೆ.

4 ಆಹಾ, ಕರ್ತನು ಅದರ ಆಸ್ತಿಯನ್ನು ಆಕ್ರಮಿಸಿ ಪೌಳಿಗೋಡೆಯನ್ನು ಸಮುದ್ರದೊಳಗೆ ಹೊಡೆದುಹಾಕುವನು; ಪಟ್ಟಣವು ಬೆಂಕಿಗೆ ತುತ್ತಾಗುವುದು.

5 ಅಷ್ಕೆಲೋನು ಇದನ್ನು ನೋಡಿ ಹೆದರುವುದು; ಗಾಜವು ಸಹ ಅತಿ ಸಂಕಟಪಡುವುದು; ಎಕ್ರೋನು ನಿರೀಕ್ಷೆಗೆಟ್ಟು ಬಹು ವ್ಯಥೆಗೆ ಒಳಗಾಗುವುದು; ಗಾಜಕ್ಕೆ ರಾಜನೇ ಇಲ್ಲವಾಗುವನು; ಅಷ್ಕೆಲೋನು ನಿರ್ಜನವಾಗುವುದು;

6 ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಮಾಡುವರು; ಹೀಗೆ ಫಿಲಿಷ್ಟಿಯದ ಗರ್ವವನ್ನು ಭಂಗಪಡಿಸುವೆನು.

7 ಅವರು ಸವಿಯುವ ರಕ್ತವನ್ನು ಬಾಯೊಳಗಿಂದ ತೆಗೆದುಬಿಡುವೆನು; ಅವರು ಕಚ್ಚುವ ಅಸಹ್ಯಪದಾರ್ಥಗಳನ್ನು ಹಲ್ಲುಗಳ ಮಧ್ಯದಿಂದ ಕಿತ್ತುಹಾಕುವೆನು; ಅವರೂ ಇಸ್ರಾಯೇಲಿನ ದೇವರಿಗೆ ಮೀಸಲಾದ ಜನರಾಗಿ ಉಳಿಯುವರು; ಯೆಹೂದದಲ್ಲಿ ಕುಲಪಾಲಕನಂತಿರುವರು; ಎಕ್ರೋನಿನವರು ಯೆಬೂಸಿಯರ ಹಾಗಿರುವರು.

8 ಯಾರೂ ಹಾದುಹೋಗದಂತೆ ನನ್ನ ಆಲಯದ ಸುತ್ತಲು ಪಾಳೆಯನ್ನು ಹಾಕಿ ಕಾವಲಾಗಿರುವೆನು; ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ದಾಳಿಮಾಡುವುದಿಲ್ಲ; ಏಕೆಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ.


ಸಮಾಧಾನಪ್ರದನಾದ ರಾಜನ ಆಗಮನ

9 ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನೂ, ರಕ್ಷಿಸುವಾತನೂ, ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆ ಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.

10 ನಾನು ಎಫ್ರಾಯೀಮಿನ ರಥಬಲವನ್ನೂ, ಯೆರೂಸಲೇಮಿನ ಅಶ್ವಬಲವನ್ನೂ ನಿಶ್ಶೇಷಮಾಡುವೆನು; ಯುದ್ಧದ ಬಿಲ್ಲು ಇಲ್ಲವಾಗುವುದು; ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವುದು; ಆತನ ಆಳ್ವಿಕೆಯು ಸಮುದ್ರದಿಂದ ಸಮುದ್ರದವರೆಗೂ ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಹರಡಿಕೊಂಡಿರುವುದು.


ಇಸ್ರಾಯೇಲರು ಗ್ರೀಕರನ್ನು ಜಯಿಸುವುದು

11 ನನ್ನ ಜನರೇ, ನೀವು ಒಡಂಬಡಿಕೆ ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ ಸೆರೆಯಾಗಿರುವ ನಿನ್ನವರನ್ನು ನೀರಿಲ್ಲದ ಆ ಬಾವಿಯೊಳಗಿಂದ ಬರಮಾಡುವೆನು.

12 ನಿರೀಕ್ಷೆ ಹೊಂದಿದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರಡರಷ್ಟು ಸುಖವನ್ನು ದಯಪಾಲಿಸುವೆನೆಂದು ಈಗಲೂ ಪ್ರಕಟಿಸುತ್ತೇನೆ.

13 ಯೆಹೂದವೆಂಬ ಬಿಲ್ಲನ್ನು ಬೊಗ್ಗಿಸಿಕೊಂಡಿದ್ದೇನೆ. ಅದರಲ್ಲಿ ಎಫ್ರಾಯೀಮ್ ಎಂಬ ಬಾಣವನ್ನು ಹೂಡಿದ್ದೇನೆ; ಚೀಯೋನೇ, ನಾನು ನಿನ್ನ ಸಂತಾನವನ್ನು ಗ್ರೀಕ್ ಸಂತಾನಕ್ಕೆ ವಿರುದ್ಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯನ್ನಾಗಿ ಮಾಡುವೆನು.

14 ಯೆಹೋವನು ಸ್ವಜನರಿಗಾಗಿ ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣವು ಸಿಡಿಲಿನಂತೆ ಹಾರುವುದು; ಕರ್ತನಾದ ಯೆಹೋವನು ತುತ್ತೂರಿಯನ್ನು ಊದಿ ದಕ್ಷಿಣ ಪ್ರಾಂತ್ಯದ ಬಿರುಗಾಳಿಗಳೊಡನೆ ನುಗ್ಗುವನು.

15 ಸೇನಾಧೀಶ್ವರನಾದ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು ಶತ್ರುಗಳನ್ನು ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; ರಕ್ತವನ್ನು ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ, ಯಜ್ಞವೇದಿಯ ಮೂಲೆಗಳಂತೆ ರಕ್ತಪೂರ್ಣರಾಗಿರುವರು.

16 ಆ ದಿನದಲ್ಲಿ ಅವರ ದೇವರಾದ ಯೆಹೋವನು ಅವರನ್ನು ತನ್ನ ಹಿಂಡಾಗಿರುವ ಜನರೆಂದು ರಕ್ಷಿಸುವನು; ಅವರು ಕಿರೀಟದಲ್ಲಿನ ರತ್ನಗಳಂತೆ ತಮ್ಮ ದೇಶದಲ್ಲಿ ಥಳಥಳಿಸುವರು.

17 ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು! ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು