Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೂಸಲೇಮಿಗೆ ಆಶೀರ್ವಾದದ ವಾಗ್ದಾನ

1 ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.

2 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ಚೀಯೋನಿಗೆ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ. ಅತಿರೋಷಗೊಂಡು ಕುದಿಯುತ್ತೇನೆ.”

3 ಯೆಹೋವನು ಇಂತೆನ್ನುತ್ತಾನೆ, “ನಾನು ಚೀಯೋನಿಗೆ ಹಿಂದಿರುಗಿದ್ದೇನೆ, ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು; ಆಗ ಯೆರೂಸಲೇಮ್ ಸತ್ಯದ ಪಟ್ಟಣವೆಂದು ಅನ್ನಿಸಿಕೊಳ್ಳುವುದು, ಸೇನಾಧೀಶ್ವರ ಯೆಹೋವನ ಪರ್ವತಕ್ಕೆ ಪರಿಶುದ್ಧ ಪರ್ವತವೆಂಬ ಹೆಸರು ಬರುವುದು.”

4 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಯೆರೂಸಲೇಮಿನ ಚೌಕಗಳಲ್ಲಿ ಮುದುಕ ಮತ್ತು ಮುದುಕಿಯರು ಸೇರುವರು. ಅತಿ ವೃದ್ಧಾಪ್ಯದ ನಿಮಿತ್ತ ಪ್ರತಿಯೊಬ್ಬ ಮುದುಕನ ಕೈಯಲ್ಲಿ ಊರುಗೋಲಿರುವುದು.

5 ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಮತ್ತು ಬಾಲಕಿಯರು ತುಂಬಿಕೊಂಡಿರುವರು.”

6 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ?” ಇದು ಸೇನಾಧೀಶ್ವರ ಯೆಹೋವನ ನುಡಿ.

7 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ನನ್ನ ಜನರನ್ನು ಪೂರ್ವದಿಕ್ಕಿನ ದೇಶದಿಂದಲೂ, ಪಶ್ಚಿಮದಿಕ್ಕಿನ ದೇಶದಿಂದಲೂ ಪಾರುಮಾಡಿ ಬರಗೊಳಿಸುವೆನು,

8 ಅವರು ಯೆರೂಸಲೇಮಿನೊಳಗೆ ವಾಸಿಸುವರು; ಸತ್ಯಸಂಧತೆಯಿಂದಲೂ ಮತ್ತು ಸದ್ಧರ್ಮದಿಂದಲೂ ಅವರು ನನಗೆ ಪ್ರಜೆಯಾಗಿರುವರು. ಹಾಗೆಯೇ ನಾನು ಅವರಿಗೆ ದೇವರಾಗಿರುವೆನು.”

9 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ದೇವಾಲಯವನ್ನು ಕಟ್ಟುವ ಉದ್ದೇಶದಿಂದ ಸೇನಾಧೀಶ್ವರ ಯೆಹೋವನ ಆ ಮಂದಿರದ ಅಸ್ತಿವಾರವನ್ನು ಹಾಕಿದ ಕಾಲದಲ್ಲಿಯೂ ಇದ್ದ ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ!

10 ಆ ಕಾಲಕ್ಕೆ ಮುಂಚೆ ಮನುಷ್ಯನಿಗಾಗಲಿ, ಪಶುವಿಗಾಗಲಿ ದುಡಿತದಿಂದ ಏನೂ ಜೀವನವಾಗುತ್ತಿರಲಿಲ್ಲ; ಹೋಗಿ ಬರುವವರಿಗೆ ಶತ್ರುಗಳ ದೆಸೆಯಿಂದ ಭಯವಿಲ್ಲದೆ ಇರಲಿಲ್ಲ; ಒಬ್ಬರನೊಬ್ಬರು ಎದುರಿಸುವಂತೆ ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು.

11 ಇಂದಿನಿಂದಲೋ ಈ ಜನಶೇಷದವರ ವಿಷಯದಲ್ಲಿ ನಾನು ಪೂರ್ವಕಾಲದಲ್ಲಿ ಇದ್ದಂತೆ ಇರುವುದಿಲ್ಲ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

12 “ನೆಮ್ಮದಿಯ ಬೆಳೆಯಾಗುವುದು; ದ್ರಾಕ್ಷಾಲತೆಯು ಹಣ್ಣುಬಿಡುವುದು, ಭೂಮಿಯು ಧಾನ್ಯವನ್ನೀಯುವುದು, ಆಕಾಶವು ಇಬ್ಬನಿಯನ್ನು ಸುರಿಸುವುದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.

13 ಯೆಹೂದ ಕುಲವೇ, ಇಸ್ರಾಯೇಲ್ ವಂಶವೇ, ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ, ಹಾಗೆಯೇ ನಾನು ನಿಮ್ಮನ್ನು ರಕ್ಷಿಸಿ ಆಶೀರ್ವದಿಸುವೆನು; ಹೆದರಬೇಡಿರಿ, ನಿಮ್ಮ ಕೈಗಳು ಬಲಗೊಳ್ಳಲಿ!”

14 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನಗೆ ಸಿಟ್ಟೆಬ್ಬಿಸಿದಾಗ ನಿಮಗೆ ಕೇಡುಮಾಡಬೇಕೆಂದು ನಾನು ಕರುಣೆಯಿಲ್ಲದೆ ಸಂಕಲ್ಪಸಿದಂತೆ

15 ಈ ಕಾಲದಲ್ಲಿಯೂ ಯೆರೂಸಲೇಮಿಗೂ, ಯೆಹೂದ ಕುಲಕ್ಕೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ; ಹೆದರಬೇಡಿರಿ. ಇದು ಸೇನಾಧೀಶ್ವರನಾದ ಯೆಹೋವನ ನುಡಿ.

16 “ನೀವು ಮಾಡಬೇಕಾದ ಕಾರ್ಯಗಳು ಇವೇ. ಪ್ರತಿಯೊಬ್ಬನೂ ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ; ನಿಮ್ಮ ಚಾವಡಿಗಳಲ್ಲಿ ಸತ್ಯವನ್ನೂ, ಸಮಾಧಾನವಾದ ನ್ಯಾಯವನ್ನೂ ಸ್ಥಾಪಿಸಿರಿ;

17 ನಿಮ್ಮಲ್ಲಿ ಯಾವನೂ ತನ್ನ ಹೃದಯದಲ್ಲಿ ನೆರೆಯವನಿಗೆ ಕೇಡನ್ನು ಬಗೆಯದಿರಲಿ; ಸುಳ್ಳು ಸಾಕ್ಷಿಗೆ ಎಂದೂ ಸಂತೋಷಪಡಬೇಡಿರಿ; ನಾನು ಇವುಗಳನ್ನೆಲ್ಲಾ ದ್ವೇಷಿಸುವವನಾಗಿದ್ದೇನೆ; ಇದು ಯೆಹೋವನ ನುಡಿ.”

18 “ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.

19 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನು ಉಂಟುಮಾಡುವವು; ಹೀಗಿರಲು ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.’”

20 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;

21 ಒಂದು ಊರಿನವರು ಇನ್ನೊಂದು ಊರಿಗೆ ಹೋಗಿ, ‘ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ, ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಹೋಗೋಣ ಬನ್ನಿರಿ, ನಾವೂ ಹೋಗುತ್ತೇವೆ’ ಎಂದು ಹೇಳುವರು.

22 ಹೀಗೆ ಬಹು ದೇಶಗಳವರೂ, ಬಲವಾದ ಜನಾಂಗಗಳವರೂ ಯೆರೂಸಲೇಮಿನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ ಬರುವರು.”

23 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವು ನಿಮ್ಮೊಂದಿಗೆ ಬರುವೆವು, ಏಕೆಂದರೆ ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ’” ಎಂದು ಹೇಳುವರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು