ಜೆಕರ್ಯ 7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಕಪಟ ಉಪವಾಸ ಸರಿಯಲ್ಲ 1 ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೆಯ ವರ್ಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು. 2 ಅಷ್ಟರೊಳಗೆ ಬೇತೇಲಿನವರು ಸರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವನ ಪರಿಜನರನ್ನೂ ಯೆಹೋವನ ಪ್ರಸನ್ನತೆಯ ಪ್ರಾರ್ಥನೆಗಾಗಿ ಕಳುಹಿಸಿದ್ದರು. 3 ಆಗ, “ನಾವು ಬಹು ವರ್ಷಗಳಿಂದ ಮಾಡಿಕೊಂಡು ಬಂದಂತೆ ಮುಂದೆಯೂ ಐದನೆಯ ತಿಂಗಳಿನಲ್ಲಿ ಉಪವಾಸ ಮಾಡಿ ಅಳಬೇಕೋ? ಎಂದು ಪ್ರವಾದಿಗಳ ಮತ್ತು ಸೇನಾಧೀಶ್ವರನಾದ ಯೆಹೋವನ ಆಲಯದ ಯಾಜಕರ ಹತ್ತಿರ ವಿಚಾರಿಸಿಕೊಂಡು ಬನ್ನಿರಿ” ಎಂಬುದಾಗಿ ಅವರಿಗೆ ಅಪ್ಪಣೆಕೊಟ್ಟು ಕಳುಹಿಸಿದ್ದೇವು. 4 ಹೀಗಿರಲು ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು. 5 “ನೀನು ಯಾಜಕರಿಗೂ ದೇಶದ ಸಕಲ ಜನರಿಗೂ ಹೀಗೆ ನುಡಿ, ‘ನೀವು ಈ ಎಪ್ಪತ್ತು ವರ್ಷಗಳಿಂದಲೂ ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡುತ್ತಿದ್ದಾಗ, ಆ ನಿಮ್ಮ ಉಪವಾಸವು ನನಗಾಗಿಯೇ ಮಾಡಿದ್ದೋ? 6 ನೀವು ಭೋಜನ ಮಾಡುವಾಗಲೂ, ಪಾನಮಾಡುವಾಗಲೂ ಆ ನಿಮ್ಮ ಭೋಜನಪಾನಗಳು ನಿಮ್ಮವುಗಳಾಗಿಯೇ ಇರುವುದಲ್ಲವೇ. 7 ಯೆರೂಸಲೇಮು ಸುತ್ತಣ ಪಟ್ಟಣಗಳ ಸಮೇತ ಜನಭರಿತವಾಗಿಯೂ, ನೆಮ್ಮದಿಯಾಗಿಯೂ ಇದ್ದು, ದಕ್ಷಿಣ ಪ್ರಾಂತ್ಯದಲ್ಲಿಯೂ, ಪೂರ್ವದ ಇಳಕಲಿನ ಪ್ರದೇಶದಲ್ಲಿಯೂ ಜನರು ತುಂಬಿದ್ದಾಗ ಆ ಪೂರ್ವಕಾಲದ ಪ್ರವಾದಿಗಳ ಮೂಲಕ ಯೆಹೋವನು ಪ್ರಕಟಿಸಿದ ಮಾತುಗಳನ್ನು ನೀವು ಕೇಳಿಲ್ಲವೇ?’” ಇಸ್ರಾಯೇಲಿನ ದುರ್ಗತಿ 8 ಅಲ್ಲದೆ ಯೆಹೋವನು ಜೆಕರ್ಯನಿಗೆ ಈ ವಾಕ್ಯವನ್ನು ದಯಪಾಲಿಸಿ, 9 “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಷ್ಠೆಯಿಂದ ನ್ಯಾಯತೀರಿಸಿರಿ, 10 ಒಬ್ಬರಿಗೊಬ್ಬರು ಪ್ರೀತಿ, ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.’ 11 “ನಿಮ್ಮ ಪೂರ್ವಿಕರಾದರೋ ಗಮನಿಸದೆ ಹೆಗಲುಕೊಡದೇ ಹೋದರು, ಕೇಳಬಾರದೆಂದು ಕಿವಿಮಂದಮಾಡಿಕೊಂಡರು. 12 ಧರ್ಮೋಪದೇಶವನ್ನೂ, ಸೇನಾಧೀಶ್ವರ ಯೆಹೋವನು ಪೂರ್ವಕಾಲದ ಪ್ರವಾದಿಗಳ ಮೂಲಕ ತನ್ನ ಆತ್ಮನಿಂದ ಹೇಳಿಸಿದ ಮಾತುಗಳನ್ನೂ ಕೇಳಬಾರದೆಂದು ತಮ್ಮ ಹೃದಯಗಳನ್ನು ವಜ್ರದಷ್ಟು ಕಠಿಣಪಡಿಸಿಕೊಂಡರು. ಆದಕಾರಣ ಸೇನಾಧೀಶ್ವರ ಯೆಹೋವನ ಕೋಪಕ್ಕೆ ಗುರಿಯಾದರು. 13 “ಆಗ ಸೇನಾಧೀಶ್ವರ ಯೆಹೋವನು ಇಂತೆಂದನು, ‘ನಾನು ಕೂಗಿದರೂ ಅವರು ಹೇಗೆ ಕೇಳಲಿಲ್ಲವೋ ಹಾಗೆ ಅವರು ಕೂಗಿದರೂ ನಾನು ಕೇಳುವುದಿಲ್ಲ. 14 ಅವರು ನೋಡದ ಎಲ್ಲಾ ಜನಾಂಗಗಳ ಮಧ್ಯಕ್ಕೆ ಅವರನ್ನು ತೂರಿಬಿಡುವೆನು. ಯೆಹೋವನ ಈ ಮಾತಿನಂತೆ ಅವರು ಚದರಿದ ಮೇಲೆ ದೇಶವು ಹಾಳಾಯಿತು. ಅದರಲ್ಲಿ ಯಾರೂ ಹೋಗುತ್ತಿರಲಿಲ್ಲ, ಬರುತ್ತಿರಲಿಲ್ಲ; ಆ ರಮ್ಯ ದೇಶವನ್ನು ಹಾಳುಮಾಡಿದರು.’” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.