ಜೆಕರ್ಯ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದೀಪಸ್ತಂಭ ಮತ್ತು ಎಣ್ಣೇ ಮರಗಳ ದರ್ಶನ 1 ಅನಂತರ ವಿವರಿಸುವ ದೇವದೂತನು ಮತ್ತೆ ಬಂದು ನಿದ್ರೆಹತ್ತಿದವನ ಹಾಗಿದ್ದ ನನ್ನನ್ನು ಎಚ್ಚರಗೊಳಿಸಿ “ಏನು ನೋಡುತ್ತೀ?” ಎಂದು ಕೇಳಲು ನಾನು, 2 “ಇಗೋ, ಏಳು ದೀಪಗಳುಳ್ಳ ಸುವರ್ಣಮಯವಾದ ಒಂದು ದೀಪಸ್ತಂಭವನ್ನು ನೋಡುತ್ತೇನೆ; ಅದರ ಮೇಲಿನ ದೀಪಗಳಿಗೆ ಏಳು ನಾಳಗಳಿವೆ; ಅದರ ಮೇಲ್ಗಡೆ ಎಣ್ಣೆಯ ಪಾತ್ರೆಯಿದೆ; 3 ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಮತ್ತು ಎರಡು ಮರಗಳು ಅದರ ಪಕ್ಕಗಳಲ್ಲಿ ಇದೆ” ಎಂದು ಹೇಳಿದೆನು. 4 ಪುನಃ ನಾನು ಪ್ರಸ್ತಾಪವನ್ನೆತ್ತಿ ವಿವರಿಸುವ ದೇವದೂತನನ್ನು, “ಸ್ವಾಮೀ, ಇವು ಏನನ್ನು ಸೂಚಿಸುತ್ತದೆ?” ಎಂದು ಕೇಳಿದ್ದಕ್ಕೆ, 5 ಆ ದೇವದೂತನು “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂಬುದಾಗಿ ನನ್ನನ್ನು ಪ್ರಶ್ನೆಮಾಡಲು, “ನಾನು ಇಲ್ಲ ಸ್ವಾಮಿ” ಎಂದು ಅರಿಕೆ ಮಾಡಿದೆನು. 6 ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು, “ಪರಾಕ್ರಮದಿಂದಲ್ಲ, ಬಲದಿಂದಲ್ಲ. ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರನಾದ ಯೆಹೋವನ ನುಡಿ” ಎಂಬ ಈ ಮಾತುಗಳನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ. 7 ದೊಡ್ಡ ಬೆಟ್ಟವೇ, “ನೀನು ಯಾರು? ಜೆರುಬ್ಬಾಬೆಲನ ಮುಂದೆ ನೆಲಸಮವಾಗುವಿ; ಅವನು ಕಲಶದ ಕಲ್ಲನ್ನು ಕೋಲಾಹಲದೊಡನೆ ಮೆರವಣಿಗೆ ಮಾಡುವನು; ಇದರ ಮೇಲೆ ದೇವರ ದಯೆಯಿರಲಿ” ಎಂಬ ಜನಘೋಷವಾಗುವುದು. 8 ಅಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ, 9 “ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ. ಆ ಕೈಗಳೇ ಇದನ್ನು ಪೂರೈಸುವವು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದವನು ಸೇನಾಧೀಶ್ವರನಾದ ಯೆಹೋವನೇ” ಎಂದು ನನಗೆ ಗೊತ್ತಾಗುವುದು. 10 ಆಗ ದೂತನು “ಈ ದೀಪಗಳಿಂದ ಸೂಚಿತವಾದ ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವುದನ್ನು ಸಂತೋಷದಿಂದ ನೋಡುತ್ತೇವೆ. ಹೀಗಿರುವಲ್ಲಿ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು? 11 ಆಗ ನಾನು ದೇವದೂತನಿಗೆ, ದೀಪಸ್ತಂಭದ ಎಡಬಲದಲ್ಲಿರುವ ಈ ಎಣ್ಣೆಯ ಮರಗಳು ಏನು?” ಎಂದೆನು. 12 ಮತ್ತೆ ನಾನು ಅವನಿಗೆ, ತಮ್ಮೊಳಗಿಂದ ಚಿನ್ನದಂಥ ಎಣ್ಣೆಯನ್ನು ಪಾತ್ರೆಯಲ್ಲಿ ತುಂಬಿಸುವ ಎರಡು ಬಂಗಾರದ ನಾಳಗಳಿವೆಯಲ್ಲಾ. ಆ ನಾಳಗಳ ಬಾಯಿಗೆ ಸೇರಿರುವ ಎರಡು ಎಣ್ಣೆಕಾಯಿಗುತ್ತಿಗಳು ಏನು? ಎಂದು ಕೇಳಿದೆ. 13 ಅದಕ್ಕೆ ಆ ದೂತನು ನನಗೆ, “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂದು ಕೇಳಿದಾಗ ನಾನು, “ಇಲ್ಲ ಸ್ವಾಮೀ” ಎಂದೆ. 14 ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಆ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವ ಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ” ಎಂದು ಹೇಳಿದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.