Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಕಣಿಯವರಲ್ಲಿ ನಂಬಿಕೆ ಇಡಬಾರದು

1 ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ; ಯೆಹೋವನೇ ಮಿಂಚುಗಳನ್ನು ಉಂಟುಮಾಡುತ್ತಾನೆ, ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ, ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.

2 ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು, ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ. ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.


ಇಸ್ರಾಯೇಲಿನ ನೂತನ ಬಲ

3 ನನ್ನ ಕೋಪವು ಕುರುಬರ ಮೇಲೆ ಧಗಧಗಿಸುತ್ತದೆ. ನಾನು ಹೋತಗಳನ್ನು ದಂಡಿಸುವೆನು; ಸೇನಾಧೀಶ್ವರ ಯೆಹೋವನು ತನ್ನ ಮಂದೆಯಾದ ಯೆಹೂದ ವಂಶವನ್ನು ಪರಾಂಬರಿಸಿ ಘನವಾದ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವನು.

4 ಆ ವಂಶದಿಂದ ಮೂಲೆಗಲ್ಲು, ಆ ವಂಶದಿಂದ ಮೊಳೆ, ಆ ವಂಶದಿಂದ ಯುದ್ಧದ ಬಿಲ್ಲು, ಅಂತು ಆ ವಂಶದೊಳಗಿಂದ ಸಕಲ ಅಧಿಕಾರಿಗಳು ಉಂಟಾಗುವರು.

5 ಇವರು ವೀರರಾಗಿ ರಣರಂಗದೊಳಗೆ ಶತ್ರುಗಳನ್ನು ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು; ಯೆಹೋವನು ನಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು; ಎದುರಿಸುವ ಸವಾರರು ಭಂಗಪಡುವರು.

6 ನಾನು ಯೆಹೂದ ವಂಶವನ್ನು ಬಲಗೊಳಿಸಿ ಯೋಸೇಫನ ವಂಶವನ್ನು ಉದ್ಧರಿಸುವೆನು; ನನ್ನ ಕನಿಕರವು ಅವರ ಮೇಲೆ ಇರುವುದರಿಂದ ಅವರನ್ನು ಹಿಂದಕ್ಕೆ ಬರಮಾಡುವೆನು; ಆಗ ನಾನು ಅವರನ್ನು ತಳ್ಳಿಬಿಟ್ಟಿದ್ದು ಇಲ್ಲದಂತಾಗುವುದು; ನಾನು ಅವರ ದೇವರಾದ ಯೆಹೋವನಾಗಿದ್ದೇನಲ್ಲಾ, ಅವರ ಮೊರೆಯನ್ನು ಲಾಲಿಸಿ ಸದುತ್ತರವನ್ನು ನೀಡುವೆನು.


ಚದರಿದವರ ಹಿಂದಿರುಗುವಿಕೆ

7 ಎಫ್ರಾಯೀಮ್ಯರು ಶೂರರಂತಿರುವರು, ದ್ರಾಕ್ಷಾರಸ ಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವುದು; ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು, ಅವರ ಹೃದಯವು ಯೆಹೋವನಲ್ಲಿ ಆನಂದಿಸುವುದು.

8 ನಾನು ಅವರನ್ನು ಸಿಳ್ಳುಹಾಕಿ ಕರೆದು ಕೂಡಿಸುವೆನು. ಅವರನ್ನು ವಿಮೋಚಿಸಿದೆನಲ್ಲಾ; ಅವರು ಹಿಂದೆ ವೃದ್ಧಿಯಾದಂತೆ ಮುಂದೆಯೂ ವೃದ್ಧಿಯಾಗುವರು.

9 ನಾನು ಅವರನ್ನು ಜನಾಂಗಗಳೊಳಗೆ ಚೆಲ್ಲಿದರೂ ಅವರು ದೂರದೇಶಗಳಲ್ಲಿ ನನ್ನನ್ನು ಸ್ಮರಿಸಿಕೊಂಡು ಸಂತಾನಸಮೇತವಾಗಿ ಬದುಕಿ ಬಾಳಿ ಹಿಂದಿರುಗಿ ಬರುವರು.

10 ನಾನು ಅವರನ್ನು ಐಗುಪ್ತ ದೇಶದೊಳಗಿಂದ ಹಿಂದಕ್ಕೆ ಕರೆದುತರುವೆನು; ಅಶ್ಶೂರದಿಂದ ಕೂಡಿಸುವೆನು; ಗಿಲ್ಯಾದ್, ಲೆಬನೋನುಗಳ ಪ್ರಾಂತ್ಯಕ್ಕೆ ಬರಮಾಡುವೆನು; ಅವರಿಗೆ ಸಾಕಾಗುವಷ್ಟು ಸ್ಥಳ ಸಿಕ್ಕದು.

11 ಅವರು ಕಷ್ಟವೆಂಬ ಕಡಲನ್ನು ದಾಟಿ ಬರುವರು, ಅಲ್ಲಕಲ್ಲೋಲವಾದ ಸಮುದ್ರವನ್ನು ಭೇದಿಸಿಬಿಡುವರು, ನೈಲ್ ನದಿಯೆಲ್ಲಾ ತಳದ ತನಕ ಒಣಗುವುದು. ಅಶ್ಶೂರದ ಗರ್ವವು ತಗ್ಗಿಸಲ್ಪಡುವುದು, ಐಗುಪ್ತದ ರಾಜದಂಡವು ತಪ್ಪಿಹೋಗುವುದು.

12 ಅವರು ಯೆಹೋವನಲ್ಲಿ ಬಲಗೊಳ್ಳುವರು, ಆತನ ಹೆಸರಿನಲ್ಲಿ ನಡೆದುಕೊಳ್ಳುವರು; ಇದು ಯೆಹೋವನ ನುಡಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು