ಚೆಫನ್ಯ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆಮೋನನ ಮಗನೂ, ಯೆಹೂದದ ಅರಸನಾದ ಯೋಷೀಯನ ಕಾಲದಲ್ಲಿ ಕೂಷಿಯನ ಮಗನೂ, ಗೆದಲ್ಯನ ಮೊಮ್ಮಗನೂ, ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವನು ದಯಪಾಲಿಸಿದ ವಾಕ್ಯ. ಮುಂಬರಲಿರುವ ನಾಶನ 2 ಯೆಹೋವನು ಇಂತೆನ್ನುತ್ತಾನೆ, “ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು. 3 ಮನುಷ್ಯರನ್ನೂ, ಪಶುಗಳನ್ನೂ, ಮತ್ತು ಆಕಾಶದ ಪಕ್ಷಿಗಳನ್ನೂ, ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ, ಅವುಗಳಿಗೆ ಅಡ್ಡಬೀಳುವ ದುಷ್ಟರನ್ನೂ ಸಂಹರಿಸುವೆನು; ಭೂಮಿಯ ಮೇಲಿಂದ ದುಷ್ಟರ ಸಂತಾನವನ್ನೂ ಕಿತ್ತುಹಾಕುವೆನು” ಇದು ಯೆಹೋವನ ನುಡಿ. ಯೆಹೂದಕ್ಕೆ ದೇವರ ದಂಡನೆ ತಪ್ಪದು 4 “ನಾನು ಯೆಹೂದದ ಮೇಲೂ ಮತ್ತು ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ, ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ, ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮ ಮಾಡುವೆನು, 5 ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣವನ್ನು ಪೂಜಿಸುವವರನ್ನೂ, ಯೆಹೋವನ ಭಕ್ತರೆಂದು ಪ್ರತಿಜ್ಞೆ ಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ, 6 ಯೆಹೋವನನ್ನು ಆಶ್ರಯಿಸದೆ, ಯೆಹೋವನ ದರ್ಶನವನ್ನು ಬಯಸದೇ, ಯೆಹೋವನ ಮಾರ್ಗ ಬಿಟ್ಟವರನ್ನೂ ಧ್ವಂಸ ಮಾಡುವೆನು.” 7 ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ, ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿತು; ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಪ್ರತಿಷ್ಠಿಸಿದ್ದಾನೆ. 8 “ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ, ರಾಜವಂಶದವರನ್ನೂ, ವಿದೇಶ ವಸ್ತ್ರದಾರಿಗಳೆಲ್ಲರನ್ನೂ ದಂಡಿಸುವೆನು. 9 ಹೊಸ್ತಿಲನ್ನು ದಾಟಿ ಮೋಸ ಹಿಂಸೆಗಳಿಂದ ದೋಚಿದ್ದನ್ನು, ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು. 10 ಅದೇ ದಿನದಲ್ಲಿ ಮೀನುಬಾಗಿಲಿನಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿನಿಂದ ಭೀಕರ ಶಬ್ದವನ್ನು ಕೇಳುವಿರಿ, ಅಂತು ದೊಡ್ಡ ಗದ್ದಲವಾಗುವುದು” ಇದು ಯೆಹೋವನ ನುಡಿ. 11 ಯೆರುಸಲೇಮ್ ಜಿಲ್ಲೆಯ ಮಾರುಕಟ್ಟೆಯಲ್ಲಿ ವಾಸಿಸುವವರೇ, ಕೂಗಿರಿ, ಏಕೆಂದರೆ ಎಲ್ಲಾ ವರ್ತಕರ ಜನರೆಲ್ಲಾ ಹಾಳಾದರು, ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು. 12 ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು, ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ, ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ, ಮಡ್ಡಿಯಂತೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು. 13 ಅವರ ಆಸ್ತಿಯು ಸೂರೆಯಾಗುವುದು, ಅವರ ಮನೆಗಳು ಹಾಳಾಗುವವು; ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು, ದ್ರಾಕ್ಷಾತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು. ಯೆಹೋವನ ದಿನದ ವಿವರಣೆ 14 ಯೆಹೋವನ ಮಹಾದಿನವು ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ; ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ! 15 ಆ ದಿನದ ಸುದ್ದಿ ಕಹಿಯಾದುದು, ಅದು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ! 16 ಕೋಟೆಗಳನ್ನೂ, ದೊಡ್ಡ ಕೊತ್ತಲುಗಳನ್ನೂ ಹಿಡಿಯಲು, ಆರ್ಭಟಿಸಿ ಕೊಂಬೂದುವ ದಿನ. 17 ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು; ಅವರ ರಕ್ತವು ಧೂಳಿನಂತೆ ಚೆಲ್ಲಿ ಹೋಗುವುದು, ಅವರ ಮಾಂಸವು ಮಲದ ಹಾಗೆ ಬಿದ್ದಿರುವುದು! 18 ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು! |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.