ಗಲಾತ್ಯದವರಿಗೆ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪರಸ್ಪರ ಭಾರವನ್ನು ಹೊತ್ತುಕೊಳ್ಳಿರಿ 1 ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. 2 ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ನೀತಿನಿಯಮಗಳನ್ನು ನೆರವೇರಿಸಿರಿ. 3 ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ. 4 ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ. 5 ಏಕೆಂದರೆ ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು. 6 ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು. 7 ಮೋಸಹೋಗಬೇಡಿರಿ. ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. 8 ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. 9 ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. 10 ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ. ಕಡೆ ಎಚ್ಚರಿಕೆಗಳು ಮತ್ತು ವಂದನೆಗಳು 11 ಇಗೋ ನೋಡಿರಿ, ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ. 12 ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ. 13 ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. 14 ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು. 15 ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು. 16 ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ. 17 ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ. 18 ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.