ಗಲಾತ್ಯದವರಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು. 2 ತಂದೆಯು ಗೊತ್ತುಮಾಡಿದ ಸಮಯದವರೆಗೂ ಪಾಲಕರ ಮತ್ತು ಕಾರ್ಯನಿರ್ವಾಹಕರ ಅಧೀನದಲ್ಲಿರುವನು. 3 ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲತತ್ವಗಳಿಗೆ ಅಧೀನರಾಗಿದ್ದೆವು. 4-5 ಆದರೆ ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡಿಸಬೇಕೆಂತಲೂ, ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, ಧರ್ಮಶಾಸ್ತ್ರಾಧೀನನಾಗಿಯೂ ಬಂದನು. 6 ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. 7 ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ವಾರಸುದಾರನು ಆಗಿದ್ದೀ. ಗಲಾತ್ಯದವರ ಕುರಿತು ಪೌಲನ ಕಾಳಜಿ 8 ಹಿಂದೆ ನೀವು ದೇವರನ್ನು ಅರಿಯದೆ, ಸ್ವಾಭಾವಿಕವಾಗಿ ದೇವರಲ್ಲದವರುಗಳಿಗೆ ದಾಸರಾಗಿದ್ದೀರಿ. 9 ಈಗಲಾದರೋ ನೀವು ದೇವರನ್ನು ತಿಳಿದುಕೊಂಡಿದ್ದೀರಿ, ಅಥವಾ ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ. ಹೀಗಿರಲಾಗಿ ನೀವು ಬಲವಿಲ್ಲದ, ಕೆಲಸಕ್ಕೆ ಬಾರದ, ದರಿದ್ರವಾದ ಮೂಲತತ್ವಗಳಿಗೆ ಹಿಂತಿರುಗಿ ಅದಕ್ಕೆ ದಾಸರಾಗುವುದಕ್ಕೆ ಏಕೆ ಬಯಸುತ್ತೀರಿ? 10 ನೀವು ಆಯಾ ದಿನಗಳನ್ನೂ, ತಿಂಗಳುಗಳನ್ನೂ, ಕಾಲಗಳನ್ನೂ, ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸಿದ್ದೀರಿ. 11 ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ಕುರಿತು ಭಯಪಡುತ್ತೇನೆ. 12 ಸಹೋದರರೇ, ನಾನು ನಿಮ್ಮಂತೆ ಆದಹಾಗೆ ನೀವು ನನ್ನಂತೆ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಅನ್ಯಾಯ ಮಾಡಲಿಲ್ಲ. 13 ನಾನು ದೈಹಿಕವಾಗಿ ಅಸ್ವಸ್ಥನಾಗಿದ್ದುದರಿಂದ ನಿಮ್ಮಲ್ಲಿದ್ದು ಮೊದಲನೆಯ ಬಾರಿಗೆ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ. 14 ನನ್ನ ದೇಹಸ್ಥಿತಿಯಿಂದ ನಿಮಗೆ ಸಮಸ್ಯೆಗಳು ಬಂದಾಗ್ಯೂ ಕೂಡ, ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ನನ್ನನ್ನು ದೇವದೂತನಂತೆ, ಕ್ರಿಸ್ತ ಯೇಸುವಿನಂತೆ ಸೇರಿಸಿಕೊಂಡಿದ್ದೀರಿ. 15 ಆಗ ನಮಗೆ ಶುಭವಾಯಿತೆಂದು ನೀವು ಅಂದುಕೊಂಡಿರಲ್ಲಾ, ಆ ನಿಮ್ಮ ಶುಭವು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿರೆಂದು ನಿಮ್ಮನ್ನು ಕುರಿತು ಸಾಕ್ಷಿ ಹೇಳುತ್ತೇನೆ. 16 ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ನಿಮಗೆ ಶತ್ರುವಾಗಿದ್ದೇನೋ? 17 ಅವರು ನಿಮ್ಮನ್ನು ಮೆಚ್ಚಿಸುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿರುವುದು ಒಳಿತಾಗಿ ಅಲ್ಲ, ನೀವು ಅವರಿಗೆ ಆಸಕ್ತಿಯನ್ನು ತೋರಿಸಬೇಕೆಂದು ಅವರು ನಿಮ್ಮನ್ನು ನನ್ನಿಂದ ಆಗಲಿಸುವುದಕ್ಕೆ ಬಯಸುತ್ತಿದ್ದಾರೆ. 18 ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೆಯ ವಿಷಯಕ್ಕಾಗಿ ನೀವು ಆಸಕ್ತಿಯನ್ನು ತೋರಿಸುವುದು ಒಳ್ಳೆಯದೇ. 19 ನನ್ನ ಪ್ರಿಯರಾದ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಾನು ನಿಮಗಾಗಿ ಪ್ರಸವವೇದನೆ ಪಡುತ್ತಿರುವೆನು. 20 ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತೋಚುತ್ತಿಲ್ಲ. ಬಹುಶಃ ನೇರವಾಗಿ ನಿಮ್ಮ ಬಳಿಗೆ ಬಂದು, ನಿಮ್ಮ ಮಧ್ಯದಲ್ಲೇ ಇದ್ದು ನನ್ನ ಮಾತಿನ ರೀತಿಯನ್ನು ಬದಲಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ! ಸಾರಳ ಮತ್ತು ಹಾಗರಳ ದೃಷ್ಟಾಂತ 21 ಧರ್ಮಶಾಸ್ತ್ರಕ್ಕೆ ಅಧೀನರಾಗಿರುವುದಕ್ಕೆ ಬಯಸುವವರೇ, ಧರ್ಮಶಾಸ್ತ್ರವು ಏನು ಹೇಳುತ್ತದೆಂದು ನಿಮಗೆ ತಿಳಿದಿಲ್ಲವೋ? ನನಗೆ ತಿಳಿಯಪಡಿಸಿರಿ. 22 ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನು ದಾಸಿಯಲ್ಲಿ ಹುಟ್ಟಿದವನು, ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು. 23 ದಾಸಿಯ ಮಗನು ಶರೀರಕ್ಕನುಸಾರವಾಗಿ ಹುಟ್ಟಿದವನು, ಸ್ವತಂತ್ರಳಾದವಳ ಮಗನಾದರೋ ವಾಗ್ದಾನದ ಮೂಲಕ ಹುಟ್ಟಿದವನು. 24 ಈ ಸಂಗತಿಗಳು ಹೋಲಿಕೆಗಳಾಗಿವೆ. ಹೇಗೆಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ, ಒಂದು ಒಡಂಬಡಿಕೆಯು ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು, ಅದೇ ಹಾಗರಳು. 25 ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ. 26 ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. 27 “ಹೆರದ ಬಂಜೆಯೇ, ಆನಂದಿಸು. ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು, ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಬರೆದಿದೆಯಲ್ಲಾ. 28 ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ. 29 ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ. 30 ಆದರೆ ದೇವರ ವಾಕ್ಯವು ಏನು ಹೇಳುತ್ತದೆ? “ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು. ದಾಸಿಯ ಮಗನು ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯಸ್ಥನಾಗಬಾರದು” ಎಂದು ಹೇಳುತ್ತದೆ. 31 ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಸ್ವತಂತ್ರಳಾದವಳ ಮಕ್ಕಳೇ ಎಂದು ತಿಳಿದುಕೊಳ್ಳಿರಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.