ಗಲಾತ್ಯದವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಧರ್ಮಶಾಸ್ತ್ರವೋ ಅಥವಾ ನಂಬಿಕೆಯೋ 1 ಎಲೈ ಬುದ್ಧಿಹೀನರಾದ ಗಲಾತ್ಯದವರೇ! ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸು ಕ್ರಿಸ್ತನು ಶಿಲುಬೆಗೆ ಹಾಕಿಸಿಕೊಂಡವನಾಗಿ ನಿಮ್ಮ ಕಣ್ಣೆದುರಿನಲ್ಲಿಯೇ ವರ್ಣಿಸಲ್ಪಟ್ಟನಲ್ಲವೇ? 2 ಒಂದು ಸಂಗತಿಯನ್ನು ಮಾತ್ರ ನಿಮ್ಮಿಂದ ತಿಳಿದುಕೊಳ್ಳಬೇಕೆಂದಿದ್ದೇನೆ. ನೀವು ದೇವರಾತ್ಮನನ್ನು ಹೊಂದಿದ್ದು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸಿದ್ದರಿಂದಲೋ ಅಥವಾ ನಂಬಿಕೆಯ ಸುವಾರ್ತೆಯನ್ನು ಕೇಳಿದ್ದರಿಂದಲೋ? 3 ನೀವು ಇಷ್ಟು ಬುದ್ಧಿಯಿಲ್ಲದವರೋ? ದೇವರಾತ್ಮಾನುಸಾರವಾಗಿ ಪ್ರಾರಂಭಿಸಿ ಈಗ ಶಾರೀರಿಕ ಸಂಬಂಧವಾಗಿ ಕೊನೆಗೊಳಿಸುವಿರೋ? 4 ನೀವು ಇವೆಲ್ಲವುಗಳನ್ನು ಅನುಭವಿಸಿದ್ದು ವ್ಯರ್ಥವೋ? ವ್ಯರ್ಥವೇ ಎಂದು ಹೇಳಬೇಕೇನು? 5 ದೇವರು ತನ್ನ ಆತ್ಮನನ್ನು ನಿಮಗೆ ಹೇರಳವಾಗಿ ಕೊಟ್ಟು ನಿಮ್ಮಲ್ಲಿ ಮಹತ್ಕಾರ್ಯಗಳನ್ನು ನಡಿಸುತ್ತಾ ಬಂದದ್ದು, ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ ಅಥವಾ ಸುವಾರ್ತೆಯನ್ನು ಕೇಳಿ ನಂಬಿದ್ದರಿಂದಲೋ? 6 ಅಬ್ರಹಾಮನು “ದೇವರನ್ನು ನಂಬಿದನು, ಆ ನಂಬಿಕೆಯು ಅವನ ಪಾಲಿಗೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ಬರೆದಿದೆಯಲ್ಲಾ. 7 ಆದ್ದರಿಂದ ನಂಬುವವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿರಿ. 8 ದೇವರು ಅನ್ಯಜನರನ್ನು ನಂಬಿಕೆಯ ನಿಮಿತ್ತವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬುದಾಗಿರುವ ವೇದವಾಕ್ಯವನ್ನು ಮೊದಲೇ ಕಂಡು ಅಬ್ರಹಾಮನಿಗೆ, “ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವುದೆಂಬ” ಸುವಾರ್ತೆಯನ್ನು ಮುಂಚಿತವಾಗಿಯೇ ತಿಳಿಸಿತು. 9 ಹೀಗಿರಲಾಗಿ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವವರು, ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಆಶೀರ್ವಾದವನ್ನು ಹೊಂದುವರು. 10 ಮೋಶೆಯ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಆಧಾರಮಾಡಿಕೊಂಡಿರುವವರೆಲ್ಲರೂ ಶಾಪಾಗ್ರಸ್ತರಾಗಿದಾರೆ. ಹೇಗೆಂದರೆ, “ಧರ್ಮಶಾಸ್ತ್ರದಲ್ಲಿ ಬರೆದಿರುವವುಗಳೆಲ್ಲವನ್ನೂ ಪ್ರತಿನಿತ್ಯವೂ ಪಾಲಿಸದಿರುವ ಪ್ರತಿಯೊಬ್ಬನು ಶಾಪಗ್ರಸ್ತನೇ” ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ. 11 ಇದಲ್ಲದೆ ಧರ್ಮಶಾಸ್ತ್ರದಿಂದ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿದೆ, ಏಕೆಂದರೆ “ನೀತಿವಂತನು ನಂಬಿಕೆಯಿಂದಲೇ ಬದುಕುವನು” ಎಂದು ಪ್ರಕಟವಾಗಿದೆ. 12 ಹಾಗೆಯೇ ಮೋಶೆಯ ಧರ್ಮಶಾಸ್ತ್ರಕ್ಕೆ ನಂಬಿಕೆಯು ಆಧಾರವಾಗಿಲ್ಲ, “ಅದರ ನೇಮಗಳನ್ನು ಆಚರಿಸುವವನೇ ಅವುಗಳ ಮೂಲಕ ಬದುಕುವನು” ಎಂದು ಬರೆದಿದೆ. 13 ಯೇಸು ಕ್ರಿಸ್ತನು ನಮನ್ನು ಶಾಪದಿಂದ ಬಿಡಿಸುವುದಕ್ಕಾಗಿ ತಾನೇ ಶಾಪಗ್ರಸ್ತನಾದನು. ಏಕೆಂದರೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಮರಕ್ಕೆ ತೂಗುಹಾಕಲ್ಪಟ್ಟು ಪ್ರತಿಯೊಬ್ಬನು ಶಾಪಗ್ರಸ್ತನು” ಎಂದು ತಿಳಿದಿದ್ದೇವೆ. 14 ಅಬ್ರಹಾಮನಿಗೆ ಉಂಟಾದ ಆಶೀರ್ವಾದವು, ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆಲ್ಲ ಸಿಗುವಂತೆಯೂ ಮತ್ತು ದೇವರು ವಾಗ್ದಾನ ಮಾಡಿದ ಪರಿಶುದ್ಧಾತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ, ತನ್ನ ಮರಣದ ಮೂಲಕ ಕ್ರಿಸ್ತನು ನಮ್ಮನ್ನು ಕೊಂಡುಕೊಂಡನು. ಧರ್ಮಶಾಸ್ತ್ರವು ಹಾಗೂ ವಾಗ್ದಾನವು 15 ಸಹೋದರರೇ, ದೈನಂದಿನ ಜೀವನದಿಂದ ಒಂದು ದೃಷ್ಟಾಂತವನ್ನು ನಿಮಗೆ ಹೇಳುತ್ತೇನೆ, ಒಬ್ಬನು ಮತ್ತೊಬ್ಬನೊಡನೆ ಸ್ಥಿರಪಡಿಸಿದ ಒಂದು ಒಪ್ಪಂದವು ಕೇವಲ ಮನುಷ್ಯನದ್ದಾಗಿದ್ದರೂ, ಅದನ್ನು ಯಾರೂ ರದ್ದುಮಾಡುವಂತಿಲ್ಲ ಮತ್ತು ಅದಕ್ಕೆ ಏನನ್ನೂ ಸೇರಿಸುವಂತಿಲ್ಲ. 16 ಹಾಗೆಯೇ, ದೇವರು ಅಬ್ರಹಾಮನಿಗೆ ಮತ್ತು ಅವನಿಂದ ಬರುವ ಪೀಳಿಗೆಗೆ ವಾಗ್ದಾನ ಮಾಡಿದನು. ಆದರೆ “ಪೀಳಿಗೆ” ಎಂದು ಹೇಳಿದಾಗ, ಅದು ವಂಶದಲ್ಲಿ ಇರುವ ಎಲ್ಲರಿಗೂ ಅನ್ವಯಿಸದೇ, ಅಬ್ರಹಾಮನ ವಂಶಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನೇ ಸೂಚಿಸುತ್ತದೆ. ಆ ಒಬ್ಬನು ಕ್ರಿಸ್ತನೇ. 17 ನಾನು ಹೇಳಬಯಸುವುದೇನೆಂದರೆ, ದೇವರು ಮೊದಲು ಅನುಮೋದಿಸಿದ ಒಡಂಬಡಿಕೆಯನ್ನು, ನಾನೂರ ಮೂವತ್ತು ವರ್ಷಗಳ ನಂತರ ಬಂದ ಮೋಶೆಯ ಧರ್ಮಶಾಸ್ತ್ರವು ಅದನ್ನು ನಿರರ್ಥಕಗೊಳಿಸಿ, ಆ ವಾಗ್ದಾನವನ್ನು ಬರಿದಾಗಿಮಾಡಲು ಸಾಧ್ಯವಿಲ್ಲ. 18 ಅಬ್ರಹಾಮನಿಗೆ ಸಿಕ್ಕ ಆ ಬಾಧ್ಯತೆ ಮೋಶೆಯ ಧರ್ಮಶಾಸ್ತ್ರದ ಮೇಲೆ ಆಧಾರಗೊಂಡಿರುವುದಾದರೆ, ವಾಗ್ದಾನದ ಮೇಲೆ ಆಧಾರವಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದೇವರು ಅಬ್ರಹಾಮನಿಗೆ ಕೊಟ್ಟ ಬಾಧ್ಯತೆಯನ್ನು ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. 19 ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ಯಾತಕ್ಕೆ? ವಾಗ್ದಾನದಲ್ಲಿ ಸೂಚಿತನಾದವನು ಹುಟ್ಟಿ ಬರುವತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವುದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು. 20 ಒಂದೇ ಪಕ್ಷವಿದ್ದರೆ ಮಧ್ಯಸ್ಥನು ಬೇಕಿಲ್ಲ. ದೇವರಾದರೋ ಒಬ್ಬನೇ. ದಾಸರು ಹಾಗೂ ಮಕ್ಕಳು 21 ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳಿದುಕೊಳ್ಳಬಾರದು. ಬದುಕಿಸುವುದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಅದನ್ನು ಅನುಸರಿಸುವುದರ ಮೂಲಕ ನಿಸ್ಸಂದೇಹವಾಗಿ ನೀತಿಯುಂಟಾಗುತ್ತಿತ್ತು. 22 ಸಮಸ್ತ ಲೋಕವು ಪಾಪಕ್ಕೆ ಅಧೀನವಾಯಿತೆಂದು ಪವಿತ್ರಗ್ರಂಥವು ಸ್ಪಷ್ಪೀಕರಿಸುತ್ತದೆ. ಹೀಗಿರುವುದರಿಂದ ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ. 23 ಆದರೆ ಯೇಸು ಕ್ರಿಸ್ತನ ನಂಬಿಕೆಯಲ್ಲಿ ಜೀವಿಸುವ ಕಾಲ ಬರುವುದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವುದಕ್ಕಾಗಿ ಮೋಶೆಯ ಧರ್ಮಶಾಸ್ತ್ರದಿಂದ ನಾವು ಬಂಧಿಸಲ್ಪಟ್ಟಿದ್ದೆವು. 24 ನಾವು ನಂಬಿಕೆಯಿಂದ ಯೇಸು ಕ್ರಿಸ್ತನಲ್ಲಿ ನೀತಿವಂತರೆಂಬ ನಿರ್ಣಯವನ್ನು ಹೊಂದುವ ಕಾಲ ಬರುವ ತನಕ, ಮೋಶೆಯ ಧರ್ಮಶಾಸ್ತ್ರವು ನಮ್ಮನ್ನು ಮುನ್ನಡೆಸುವ ಪಾಲಕನಂತಾಗಿತ್ತು. 25 ಆದರೆ ಈಗ ಕ್ರಿಸ್ತ ನಂಬಿಕೆಯು ಬಂದಿರಲಾಗಿ ನಾವು ಮುನ್ನಡೆಸುವಂಥ ಧರ್ಮಶಾಸ್ತ್ರದ ಹತೋಟಿಯಲ್ಲಿ ಇಲ್ಲ. 26 ಹಾಗೆ ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿದ್ದೀರಿ. 27 ಹೇಗೆಂದರೆ ಕ್ರಿಸ್ತನಲ್ಲಿ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದೀರಿ. 28 ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ. 29 ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ವಂಶದವರಾಗಿ ಹಾಗೂ ದೇವರ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.