ಗಲಾತ್ಯದವರಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ವಂದನೆಯೂ ದೇವರ ಸ್ತೋತ್ರವೂ 1 ಮನುಷ್ಯರಿಂದಾಗಲಿ ಮನುಷ್ಯರ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನು ಹಾಗೂ 2 ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದೇನೆಂದರೆ, 3 ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. 4 ಆತನು ನಮ್ಮನ್ನು ಈಗಿನ ದುಷ್ಟ ಯುಗದಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. 5 ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್. ಏಕೈಕ ಸುವಾರ್ತೆ 6 ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ಬಿಟ್ಟು, ಇಷ್ಟು ಬೇಗನೆ ಬೇರೆ ಸುವಾರ್ತೆಯ ಕಡೆಗೆ ನೀವು ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ. 7 ವಾಸ್ತವವಾಗಿ ಬೇರೊಂದು ಸುವಾರ್ತೆ ಇಲ್ಲ, ಆದರೆ ಕೆಲವರು ನಿಮ್ಮಲ್ಲಿ ಬೇಧವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. 8 ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು, ನಾವೇ ಆಗಲಿ ಅಥವಾ ಪರಲೋಕದಿಂದ ಬಂದ ದೇವದೂತನೇ ಆಗಲಿ, ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. 9 ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗುವನು. 10 ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ. ಪೌಲನು ಅಪೊಸ್ತಲನಾದ್ದದು ಹೇಗೆ 11 ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. 12 ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಬದಲಾಗಿ ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಪಡಿಸಿದನು. 13 ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು. 14 ಇದಲ್ಲದೆ ನಾನು ನನ್ನ ಪೂರ್ವಿಕರಿಂದ ಬಂದ ಸಂಪ್ರದಾಯಗಳ ಬಗ್ಗೆ ಬಹು ಅಭಿಮಾನವುಳ್ಳವನಾಗಿ, ನನ್ನ ಜನರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು. 15 ಆದರೆ ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತನ್ನ ಕೃಪೆಯಿಂದ ಕರೆದ ದೇವರು, 16 ತನ್ನ ಮಗನನ್ನು ನನ್ನೊಳಗೆ ಪ್ರಕಟಪಡಿಸುವುದಕ್ಕೆ ಮತ್ತು ಅನ್ಯಜನರಲ್ಲಿ ಆತನನ್ನು ನಾನು ಪ್ರಸಿದ್ಧಿಪಡಿಸುವವನಾಗಬೇಕೆಂದು ಇಚ್ಛಿಸಿದನು. ನಾನು ಕೂಡಲೇ ಮನುಷ್ಯರ ಆಲೋಚನೆಯನ್ನು ಕೇಳದೆ, 17 ಯೆರೂಸಲೇಮಿಗೆ ನನಗಿಂತ ಮೊದಲು ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರುಗಿ ದಮಸ್ಕಕ್ಕೆ ಬಂದೆನು. 18 ಮೂರು ವರ್ಷಗಳ ತರುವಾಯ ಕೇಫನ ಪರಿಚಯವನ್ನು ಮಾಡಿಕೊಳ್ಳಬೇಕೆಂದು ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನಗಳು ಇದ್ದೆನು. 19 ಆದರೆ ಕರ್ತನ ಸಹೋದರನಾದ ಯಾಕೋಬನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ. 20 ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲವೆಂಬುದಕ್ಕೆ ಇಗೋ, ದೇವರೇ ಸಾಕ್ಷೀ. 21 ಆ ಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು. 22 ಆದರೆ ಕ್ರಿಸ್ತನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ. 23 “ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು, ತಾನು ಹಾಳು ಮಾಡುತ್ತಿದ್ದ ನಂಬಿಕೆಯನ್ನು ಈಗ ಸಾರುತ್ತಿದ್ದಾನೆ” ಎಂಬ ಸುದ್ದಿಯನ್ನು ಅವರು ಕೇಳಿ, 24 ನನ್ನ ಕುರಿತಾಗಿ ದೇವರನ್ನು ಕೊಂಡಾಡಿದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.