Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೊಲೊಸ್ಸೆಯವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ
ಎಫೆ 4:17-6:9

1 ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ ಮೇಲಿನವುಗಳನ್ನೇ ಹುಡುಕಿರಿ, ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.

2 ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ.

3 ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ.

4 ನಿಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.

5 ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.

6 ಇವುಗಳ ನಿಮಿತ್ತ ಅವಿಧೇಯರಾಗುವವರ ಮೇಲೆ ದೇವರ ಕೋಪವು ಉಂಟಾಗುತ್ತದೆ.

7 ಹಿಂದೆ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿದ್ದು ಅವುಗಳನ್ನು ನಡಿಸುತ್ತಿದ್ದಿರಿ.

8 ಆದರೆ ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.

9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ.

10 ಈ ನೂತನ ಸ್ವಭಾವವು ಸೃಷ್ಟಿಸಿದಾತನ ಹೋಲಿಕೆಯ ಜ್ಞಾನದ ಮೇರೆಗೆ ಅದು ನೂತನವಾಗುತ್ತಾ ಬರುತ್ತದೆ.

11 ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.

12 ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

13 ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಿರಿ, ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.

14 ಇವೆಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣತೆಯ ಬಂಧವಾಗಿರುವ ಪ್ರೀತಿಯನ್ನು ಧರಿಸಿಕೊಳ್ಳಿರಿ.

15 ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ. ಇದೇ ಸಮಾಧಾನದಲ್ಲಿ ಏಕ ದೇಹವಾಗಿರುವಂತೆ ನೀವು ಕರೆಯಲ್ಪಟ್ಟಿರುವಿರಿ ಇದಲ್ಲದೆ ಕೃತಜ್ಞತೆಯುಳ್ಳವರಾಗಿರಿ.

16 ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲಜ್ಞಾನದಿಂದ ಒಬ್ಬರಿಗೊಬ್ಬರು ಉಪದೇಶಮಾಡಿಕೊಂಡು ಬುದ್ಧಿಹೇಳಿಕೊಳ್ಳಿರಿ. ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ ಮತ್ತು ಆತ್ಮೀಕವಾದ ಗೀತೆಗಳಿಂದಲೂ ಹಾಗೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಕೃತಜ್ಞತೆಯಿಂದಲೂ ಹಾಡಿರಿ.

17 ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.


ಕ್ರೈಸ್ತೀಯ ಕುಟುಂಬದ ನಿಯಮಗಳು

18 ಸತಿಯರೇ, ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.

19 ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.

20 ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.

21 ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರನ್ನು ಮನಗುಂದಿಸಿಬೇಡಿರಿ.

22 ದಾಸರೇ, ಈ ಲೋಕದಲ್ಲಿರುವ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ, ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಹಾಗೆ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಕೆಲಸಮಾಡದೆ, ಕರ್ತನಿಗೆ ಭಯಪಡುವ ಪ್ರಾಮಾಣಿಕವಾದ ಹೃದಯದಿಂದ ಕೆಲಸ ಮಾಡಿರಿ.

23 ನೀವು ಯಾವ ಕೆಲಸವನ್ನು ಮಾಡಿದರೋ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೇ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.

24 ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿರಿ.

25 ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ದಂಡನೆಯನ್ನು ಹೊಂದುವನಷ್ಟೆ ಮತ್ತು ಅದರಲ್ಲಿ ಪಕ್ಷಪಾತವಿರುವುದಿಲ್ಲ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು