ಕೀರ್ತನೆಗಳು 71 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ವೃದ್ಧಾಪ್ಯದ ಪ್ರಾರ್ಥನೆ 1 ಯೆಹೋವನೇ, ನಿನ್ನನ್ನು ಮೊರೆಹೊಕ್ಕಿದ್ದೇನೆ; ಎಂದಿಗೂ ಅವಮಾನಕ್ಕೆ ಗುರಿಮಾಡಬೇಡ. 2 ನಿನ್ನ ನೀತಿಗನುಸಾರವಾಗಿ ನನ್ನನ್ನು ಬಿಡಿಸಿ ಪಾರುಮಾಡು; ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಉದ್ಧರಿಸು. 3 ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು; ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ. ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ. 4 ದೇವರೇ, ನನ್ನನ್ನು ದುಷ್ಟನ ಕೈಯಿಂದಲೂ, ಅನ್ಯಾಯ ಮತ್ತು ಹಿಂಸಕನ ವಶದಿಂದಲೂ ತಪ್ಪಿಸು. 5 ಕರ್ತನಾದ ಯೆಹೋವನೇ, ಬಾಲ್ಯದಿಂದ ನನ್ನ ನಿರೀಕ್ಷೆಯೂ, ಭರವಸವೂ ನೀನಲ್ಲವೋ? 6 ನಾನು ಹುಟ್ಟಿದಂದಿನಿಂದ ನಿನ್ನನ್ನೇ ಅವಲಂಬಿಸಿಕೊಂಡಿದ್ದೇನೆ. ತಾಯಿ ಹೆತ್ತಂದಿನಿಂದ ನನ್ನ ಉದ್ಧಾರಕನು ನೀನೇ. ನಾನು ಯಾವಾಗಲೂ ಹಿಗ್ಗುತ್ತಿರುವುದು ನಿನ್ನಲ್ಲಿಯೇ. 7 ನನ್ನ ದುಸ್ಥಿತಿಯು ಅನೇಕರಿಗೆ ಒಂದು ಗುರುತಾಗಿದೆ; ಆದರೂ ನೀನು ನನಗೆ ಬಲವಾದ ಆಶ್ರಯಸ್ಥಾನವಾಗಿರುತ್ತೀ. 8 ನನ್ನ ಬಾಯಲ್ಲಿ ನಿನ್ನ ಸ್ತೋತ್ರವಲ್ಲದೆ ಮತ್ತೊಂದಿಲ್ಲ; ದಿನವೆಲ್ಲಾ ನಿನ್ನ ಘನತೆಯನ್ನು ವರ್ಣಿಸುತ್ತಿರುವೆನು. 9 ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ. 10 ನನ್ನ ಜೀವಕ್ಕೆ ಹೊಂಚುಹಾಕುವ ವೈರಿಗಳು ಒಟ್ಟಾಗಿ ಆಲೋಚಿಸುತ್ತಾ, 11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಹಿಡಿಯಿರಿ; ಬಿಡಿಸುವವರು ಯಾರೂ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. 12 ದೇವರೇ, ದೂರವಾಗಿರಬೇಡ. ನನ್ನ ದೇವರೇ, ಬೇಗ ಸಹಾಯಮಾಡು. 13 ನನ್ನ ಪ್ರಾಣಕ್ಕೆ ಹೊಂಚು ಹಾಕುವವರು ಅಪಮಾನ ಹೊಂದಿ ನಾಶವಾಗಲಿ; ನನಗೆ ಕೇಡುಬಗೆಯುವವರನ್ನು ನಿಂದೆ, ಅಪಮಾನಗಳು ಕವಿಯಲಿ. 14 ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು. 15 ನನ್ನ ಬಾಯಿ ನಿನ್ನ ನೀತಿಯನ್ನು, ರಕ್ಷಣೆಯನ್ನು ಹಗಲೆಲ್ಲಾ ವರ್ಣಿಸುತ್ತಿರುವುದು; ಆದರೂ ಅವುಗಳ ವಿವರಣೆ ನನಗೆ ಅಸಾಧ್ಯ. 16 ಕರ್ತನಾದ ಯೆಹೋವನೇ, ನಾನು ನಿನ್ನ ಮಹತ್ತರವಾದ ಕೃತ್ಯಗಳನ್ನು ಸ್ಮರಿಸುವವನಾಗಿ ನಿನ್ನೊಬ್ಬನ ನೀತಿಯನ್ನೇ ಪ್ರಕಟಪಡಿಸುವೆನು. 17 ದೇವರೇ, ನೀನು ಬಾಲ್ಯದಿಂದಲೂ ನನ್ನನ್ನು ಉಪದೇಶಿಸುತ್ತಾ ಬಂದಿದ್ದಿ. ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. 18 ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು. 19 ದೇವರೇ, ನಿನ್ನ ನೀತಿಯು ಆಕಾಶವನ್ನು ನಿಲುಕುವಷ್ಟು ಮಹೋನ್ನತವಾಗಿದೆ. ಮಹತ್ತರವಾದ ಕೃತ್ಯಗಳನ್ನು ನಡೆಸಿದ ದೇವರೇ, ನಿನಗೆ ಸಮಾನರು ಯಾರು? 20 ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು. 21 ನನ್ನ ಗೌರವವನ್ನು ಹೆಚ್ಚಿಸು; ನನಗೆ ಅಭಿಮುಖನಾಗಿ ಸಂತೈಸು. 22 ನನ್ನ ದೇವರೇ, ನಿನ್ನ ಸತ್ಯತೆಯನ್ನು ಸ್ಮರಿಸುವೆನು; ಸ್ವರಮಂಡಲದಿಂದ ನಿನ್ನನ್ನು ಸಂಕೀರ್ತಿಸುವೆನು. ಇಸ್ರಾಯೇಲರ ಪರಿಶುದ್ಧ ದೇವರು, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು. 23 ನನ್ನ ತುಟಿಗಳೂ ಮತ್ತು ನೀನು ರಕ್ಷಿಸಿದ ನನ್ನ ಪ್ರಾಣವೂ ನಿನ್ನನ್ನು ಹಾಡಿಹರಸುವವು. 24 ನನ್ನ ಕೇಡಿಗೆ ಪ್ರಯತ್ನಿಸಿದವರು ಆಶಾಭಂಗಪಟ್ಟು ಅಪಮಾನ ಹೊಂದಿದ್ದಾರೆ. ಆದುದರಿಂದ ನನ್ನ ನಾಲಿಗೆಯು ದಿನವೆಲ್ಲಾ ನಿನ್ನ ನೀತಿಸಾಧನೆಯನ್ನು ವರ್ಣಿಸುತ್ತಿರುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.