ಕೀರ್ತನೆಗಳು 58 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅನ್ಯಾಯಾಧಿಕಾರಿಗಳಿಗೆ ಪ್ರತಿದಂಡನೆಯಾಗಬೇಕೆಂದು ಪ್ರಾರ್ಥನೆ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ. 1 ಅಧಿಕಾರಿಗಳೇ, ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ? ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ? 2 ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ; ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ. 3 ದುಷ್ಟರು ಜನ್ಮದಿಂದಲೇ ಧರ್ಮಭ್ರಷ್ಟರು; ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿ ದಾರಿ ತಪ್ಪಿದವರು. 4 ಅವರು ಸರ್ಪದಂತೆ ವಿಷಭರಿತರು. 5 ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದ ಅಥವಾ ಅದಕ್ಕೆ ಕಿವಿಗೊಡದ ಕಳ್ಳ ಹಾವಿನಂತೆ ಇರುತ್ತಾರೆ. 6 ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು; ಯೆಹೋವನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಕಿತ್ತುಹಾಕು. 7 ಕ್ಷಣದಲ್ಲಿ ಹರಿದು ಕಾಣದೆ ಹೋಗುವ ನೀರಿನಂತೆ ಅವರು ಮಾಯವಾಗಲಿ; ಬಾಣ ತಾಗಿತೋ ಎಂಬಂತೆ ಅವರು ಬೀಳಲಿ. 8 ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ; ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ. 9 ಇನ್ನೂ ಹಸಿರಿರುರುವಾಗಲೇ ಒಲೆಗೆ ಹಾಕಿದ ಮುಳ್ಳಿನ ಕೊಂಪೆಯನ್ನು ಬಿರುಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಿಶ್ಶೇಷಮಾಡಲಿ. 10 ದುಷ್ಟರಿಗಾಗುವ ಪ್ರತಿದಂಡನೆಯನ್ನು ಭಕ್ತರು ನೋಡಿ ಹರ್ಷಿಸಿ, ಅವರ ರಕ್ತದಲ್ಲಿ ಕಾಲಾಡಿಸುವರು. 11 ನೀತಿವಂತನಿಗೆ ಫಲವುಂಟೆಂತಲೂ, ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.