ಕೀರ್ತನೆಗಳು 57 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಶತ್ರುಬಾಧಿತನಾದ ಸದ್ಭಕ್ತನ ವಿಜ್ಞಾಪನೆಯೂ ಸ್ತೋತ್ರವೂ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಅಲ್ತಷ್ಖೇತೆಂಬ ರಾಗ; ದಾವೀದನು ಸೌಲನ ಭೀತಿಯಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ. 1 ದೇವರೇ, ಕರುಣಿಸು, ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ! ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. 2 ಪರಾತ್ಪರನಾದ ದೇವರಿಗೆ ಮೊರೆಯಿಡುವೆನು, ನನ್ನ ಕಾರ್ಯವನ್ನು ಸಫಲಮಾಡುವ ದೇವರನ್ನು ಕೂಗಿ ಕರೆಯುವೆನು. 3 ಆತನು ಪರಲೋಕದಿಂದ ಆಲಿಸಿ, ನಿಂದಕರ ಮಾತಿನಿಂದ ನನ್ನನ್ನು ತಪ್ಪಿಸುವನು; ಸೆಲಾ ತನ್ನ ಪ್ರೀತಿಯನ್ನು ಮತ್ತು ಸತ್ಯತೆಯನ್ನೂ ತೋರ್ಪಡಿಸುವನು. 4 ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ; ದುರಾಶೆಯಿಂದ ಕಬಳಿಸುವಂತಹ ಮನುಷ್ಯರ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ, ನಾಲಿಗೆಗಳು ಹದವಾದ ಕತ್ತಿಗಳೇ. 5 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ. 6 ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ; ನನ್ನ ಪ್ರಾಣವು ಕುಂದಿಹೋಯಿತು. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು; ತಾವೇ ಅದರಲ್ಲಿ ಬಿದ್ದುಹೋದರು. ಸೆಲಾ 7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು. 8 ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು. 9 ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು. 10 ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ, ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ. 11 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.