ಕೀರ್ತನೆಗಳು 55 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದ್ರೋಹಿಗಳ ನಿರ್ಮೂಲಕ್ಕಾಗಿ ಪ್ರಾರ್ಥನೆ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಪದ್ಯ. 1 ದೇವರೇ, ನನ್ನ ಮೊರೆಯನ್ನು ಲಾಲಿಸು; ನನ್ನ ವಿಜ್ಞಾಪನೆಗೆ ಕಿವಿಮುಚ್ಚಿಕೊಳ್ಳಬೇಡ. 2 ನನ್ನ ಕಡೆಗೆ ಲಕ್ಷ್ಯಕೊಟ್ಟು ಸದುತ್ತರವನ್ನು ದಯಪಾಲಿಸು. 3 ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ, ಹೊಯ್ದಾಡುತ್ತಾ ನರಳುತ್ತಿದ್ದೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ, ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ. 4 ನನ್ನ ಹೃದಯವು ನೊಂದು ಬೆಂದುಹೋಗಿದೆ; ಮರಣಭಯವು ನನ್ನನ್ನು ಆವರಿಸಿಕೊಂಡಿದೆ. 5 ಅಂಜಿ ನಡುಗುತ್ತಿದ್ದೇನೆ; ದಿಗಿಲು ನನ್ನನ್ನು ಹಿಡಿದಿದೆ. 6 ನಾನು, “ಆಹಾ, ನನಗೆ ರೆಕ್ಕೆಗಳಿದ್ದರೆ ಪಾರಿವಾಳದಂತೆ ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು. 7 ಅವಸರದಿಂದ ಹಾನಿಕರವಾದ ಬಿರುಗಾಳಿಯಿಂದ ತಪ್ಪಿಸಿಕೊಂಡು, 8 ದೂರ ಹೋಗಿ ಅರಣ್ಯಸ್ಥಳದಲ್ಲಿ ಪ್ರವಾಸಿಯಾಗಿರುತ್ತಿದ್ದೆನು” ಅಂದುಕೊಂಡೆನು. ಸೆಲಾ 9 ಕರ್ತನೇ, ಅವರ ಭಾಷೆಯನ್ನು ತಾರುಮಾರುಮಾಡಿ ಅವರನ್ನು ಭ್ರಾಂತಿಗೊಳಿಸು. ಪಟ್ಟಣದಲ್ಲಿ ಕಲಹ, ಬಲಾತ್ಕಾರಗಳು ಕಾಣಬರುತ್ತವೆ. 10 ಅವೇ ಅದರ ಪೌಳಿಗೋಡೆಗಳ ಮೇಲೆ ಹಗಲಿರುಳು ಸುತ್ತುತ್ತಿರುವ ಕಾವಲುಗಾರರು; ಊರೊಳಗೆ ಕೇಡು, ತೊಂದರೆಗಳು ಪ್ರಬಲವಾಗಿವೆ. 11 ಅದರೊಳಗೆಲ್ಲಾ ನಾಶನವೇ; ದಬ್ಬಾಳಿಕೆ ಮತ್ತು ವಂಚನೆ ಅದರ ಬೀದಿಗಳಿಂದ ತೊಲಗವು. 12 ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೆನು. 13 ಆದರೆ ನೀನು ನನಗೆ ಸ್ವಕೀಯನೂ ಆಪ್ತಮಿತ್ರನೂ ಅಲ್ಲವೇ. 14 ನಾವು ಪರಸ್ಪರವಾಗಿ ರಸಭರಿತ ಸಂಭಾಷಣೆ ಮಾಡುತ್ತಾ ಭಕ್ತಸಮೂಹದೊಡನೆ ದೇವಾಲಯಕ್ಕೆ ಹೋಗುತ್ತಿದ್ದೆವಲ್ಲಾ. 15 ಆ ದುಷ್ಟರಿಗೆ ಮರಣವು ತಟ್ಟನೆ ಬರಲಿ; ಸಜೀವರಾಗಿಯೇ ಪಾತಾಳಕ್ಕೆ ಇಳಿದುಹೋಗಲಿ. ಅವರ ಮನೆಯಲ್ಲಿಯೂ, ಮನಸ್ಸಿನಲ್ಲಿಯೂ ಕೆಟ್ಟತನವೇ ತುಂಬಿದೆ. 16 ನಾನಂತೂ ದೇವರಾದ ಯೆಹೋವನಿಗೆ ಮೊರೆಯಿಡುವೆನು; ಆತನು ನನ್ನನ್ನು ರಕ್ಷಿಸುವನು. 17 ತ್ರಿಕಾಲದಲ್ಲಿಯೂ ಹಂಬಲಿಸುತ್ತಾ ಮೊರೆಯಿಡುವೆನು. ಆತನು ಹೇಗೂ ನನ್ನ ಮೊರೆಯನ್ನು ಕೇಳಿ 18 ನನ್ನ ವಿರೋಧಿಗಳು ಅನೇಕರಿದ್ದರೂ ಅವರು ನನ್ನನ್ನು ಮುಟ್ಟದಂತೆ ಸುರಕ್ಷಿತವಾಗಿ ಇಡುವನು. 19 ಅನಾದಿಕಾಲದಿಂದ ಆಸನಾರೂಢನಾಗಿರುವ ದೇವರು ಲಕ್ಷ್ಯವಿಟ್ಟು ಅವರನ್ನು ತಗ್ಗಿಸಿಬಿಡುವನು. ಸೆಲಾ ಅವರು ತಮ್ಮ ಸುಖವು ಕದಲದೆಂದುಕೊಂಡು ದೇವರಿಗೆ ಹೆದರುವುದಿಲ್ಲ. 20 ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರುದ್ಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ. 21 ಅವನ ಮಾತು ಬೆಣ್ಣೆಯಂತೆ ನುಣುಪು; ಹೃದಯವೋ ಕಲಹಮಯ. ಅವನ ನುಡಿಗಳು ಎಣ್ಣೆಗಿಂತ ನಯವಾಗಿದ್ದರೂ ಬಿಚ್ಚು ಕತ್ತಿಗಳೇ ಸರಿ. 22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು. 23 ದೇವರೇ, ನೀನು ದುಷ್ಟರನ್ನು ಪಾತಾಳದ ಕೆಳಕ್ಕೆ ದೊಬ್ಬಿಬಿಡುವಿ. ಕೊಲೆಪಾತಕರೂ ವಂಚಕರೂ ನರಾಯುಷ್ಯದ ಅರ್ಧಾಂಶವಾದರೂ ಬದುಕುವುದಿಲ್ಲ. ನಾನಂತೂ ನಿನ್ನನ್ನೆ ನಂಬಿಕೊಂಡಿರುವೆನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.