Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 49 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಐಶ್ವರ್ಯ ವ್ಯರ್ಥ; ಮರಣ ನಿಶ್ಚಯ; ಸದ್ಭಕ್ತರಿಗೆ ನಿರೀಕ್ಷೆಯುಂಟು
ಕೀರ್ತ 73
ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ.

1 ಸಕಲ ದೇಶಗಳ ಜನರೇ, ಕೇಳಿರಿ; ಭೂಲೋಕದ ನಿವಾಸಿಗಳೇ, ಕಿವಿಗೊಡಿರಿ.

2 ಜನರೇ, ಜನಾಧಿಪತಿಗಳೇ, ಬಡವರೇ ಮತ್ತು ಐಶ್ವರ್ಯವಂತರೇ, ನೀವೆಲ್ಲರೂ ಒಂದಾಗಿ ಬಂದು ಆಲಿಸಿರಿ.

3 ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವುದು; ನನ್ನ ಹೃದಯದ ಧ್ಯಾನವು ವಿವೇಕದಿಂದ ಕೂಡಿದೆ.

4 ನಾನು ಆತನ ಸಾಮ್ಯಕ್ಕೆ ಕಿವಿಗೊಟ್ಟು, ಕಿನ್ನರಿಯನ್ನು ನುಡಿಸುತ್ತಾ, ಅದರ ಗೂಡಾರ್ಥವನ್ನು ಪ್ರಕಟಿಸುವೆನು.

5 ಕೇಡಿನ ದಿನಗಳಲ್ಲಿ ಏಕೆ ಭಯಪಡಬೇಕು? ಶತ್ರುಗಳು ಮೋಸದಿಂದ ಸುತ್ತಿಕೊಂಡಿರುವಾಗ ನಾನು ಏಕೆ ಹೆದರಬೇಕು?

6 ಅವರು ತಮ್ಮ ಐಶ್ವರ್ಯವನ್ನೇ ನಂಬಿದ್ದಾರೆ; ತಾವು ಬಹಳ ಆಸ್ತಿವಂತರೆಂದು ಗರ್ವದಿಂದ ಉಬ್ಬಿದ್ದಾರೆ.

7 ಆದರೆ ಯಾರಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದಂತೆ, ದೇವರಿಗೆ ಈಡನ್ನು ಕೊಡಲಾರನು.

8 ಅವನ ಪ್ರಾಣವು ಶಾಶ್ವತವಾಗಿ ಉಳಿಯಲು, ಅಪಾರ ಹಣವನ್ನು ಕೊಟ್ಟು ಬಿಡಿಸಲಾರನು.

9 ಮರಣವನ್ನು ತಪ್ಪಿಸಿಕೊಳ್ಳುವುದಕ್ಕೆ ಎಷ್ಟು ಹಣ ಕೊಟ್ಟರೂ, ಸಾಲುವುದೇ ಇಲ್ಲ, ಅಂಥ ಪ್ರಯತ್ನ ನಿಷ್ಫಲವೆಂದು ತಿಳಿಯಬೇಕು.

10 ಸುಜ್ಞಾನಿಗಳು ಸಾಯುವುದನ್ನು ನೋಡುತ್ತೇವಲ್ಲಾ; ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ.

11 ಅವರ ಸಮಾಧಿಯೇ ಶಾಶ್ವತಮಂದಿರವು; ತಮ್ಮ ನಿವಾಸಗಳು ತಲತಲಾಂತರಕ್ಕೂ ಇರುವುದೆಂದು ಯೋಚಿಸಿ, ಭೂಮಿಗಳಿಗೆ ತಮ್ಮ ಹೆಸರುಗಳನ್ನು ಕೊಟ್ಟಿದ್ದಾರೆ.

12 ಆದರೂ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಲ್ಲ; ನಾಶವಾಗುವ ಪಶುಗಳಂತೆಯೇ ಇಲ್ಲವಾಗುತ್ತಾನೆ.

13 ಮೂರ್ಖರಿಗೂ ಅವರ ಮಾತಿನಂತೆ ನಡೆಯುವವರಿಗೂ ಇದೇ ಗತಿ. ಸೆಲಾ

14 ಅವರು ಕುರಿಗಳಂತೆ ಪಾತಾಳದಲ್ಲಿ ಸೇರಿಸಲ್ಪಡುವರು; ಮೃತ್ಯುವೇ ಅವರ ಪಾಲಕನು. ಅವರು ನೇರವಾಗಿ ಪಾತಾಳಕ್ಕೆ ಇಳಿದುಹೋಗುವರು, ಅವರಿಗೆ ನಿವಾಸವಿಲ್ಲದ ಹಾಗೆ, ಪಾತಾಳವು ಅವರ ರೂಪವನ್ನು ನಾಶಮಾಡುವುದು.

15 ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ ತಪ್ಪಿಸಿ, ನನ್ನನ್ನು ಸ್ವೀಕಾರಮಾಡುವನು. ಸೆಲಾ

16 ಒಬ್ಬನ ಐಶ್ವರ್ಯವೂ, ಗೃಹವೈಭವವೂ ವೃದ್ಧಿಯಾದಾಗ ಕಳವಳಪಡಬೇಡ.

17 ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.

18 ಸಿರಿ ಬಂದಾಗ ನೆರೆಯವರ ಹೊಗಳಿಕೆ ತಪ್ಪದು ಎಂಬಂತೆ, ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, ಜನರಸ್ತುತಿಯಿಂದಲೂ ಕೂಡಿದವನಾದರೂ,

19 ಪೂರ್ವಿಕರ ಬಳಿಗೆ ಸೇರಿ ಅವರಂತೆಯೇ, ಎಂದಿಗೂ ಬೆಳಕನ್ನು ನೋಡುವುದಿಲ್ಲ.

20 ವಿವೇಕಹೀನ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ, ನಶಿಸಿ ಹೋಗುವ ಪಶುಗಳಿಗೆ ಸಮಾನವಾಗಿ ಇಲ್ಲವಾಗುತ್ತಾನೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು