ಕೀರ್ತನೆಗಳು 44 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ನಿರಂತರ ರಕ್ಷಣೆಗಾಗಿ ಪ್ರಾರ್ಥನೆ ಕೀರ್ತ 79 1 ಪ್ರಧಾನಗಾಯಕನ ಕೀರ್ತನಸಂಹಗ್ರದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. 1 ದೇವರೇ, ಪೂರ್ವಕಾಲದಲ್ಲಿ ನಮ್ಮ ಪೂರ್ವಿಕರ ದಿನದಲ್ಲಿ, ನೀನು ನಡೆಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು. 2 ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ. 3 ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ. 4 ದೇವರೇ, ನೀನೇ ನನ್ನ ಅರಸನು; ಯಾಕೋಬನಿಗೆ ಜಯವನ್ನು ಆಜ್ಞಾಪಿಸಿದಾತನು. 5 ನಿನ್ನ ಸಹಾಯದಿಂದಲೇ ವೈರಿಗಳನ್ನು ಕೆಡವಿಬಿಡುವೆವು; ನಿನ್ನ ನಾಮಧೇಯದ ಬಲದಿಂದ ಎದುರಾಳಿಗಳನ್ನು ತುಳಿದುಬಿಡುವೆವು. 6 ನಾನು ನನ್ನ ಬಿಲ್ಲಿನಲ್ಲಿ ಭರವಸವಿಡುವುದಿಲ್ಲ; ಇಲ್ಲವೇ ನನ್ನ ಕತ್ತಿಯು ನನ್ನನ್ನು ರಕ್ಷಿಸಲಾರದು. 7 ಹಿಂಸಕರಿಂದ ಬಿಡಿಸಿದವನು ನೀನೇ; ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಾತನು ನೀನೇ. 8 ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು. 9 ಆದರೆ ಈಗ ನೀನು ನಮ್ಮನು ಕೈಬಿಟ್ಟಿದ್ದೀ, ಅವಮಾನಪಡಿಸಿದಿ; ನಮ್ಮ ಸೈನ್ಯಗಳ ಸಂಗಡ ನೀನು ಹೋಗಲಿಲ್ಲ. 10 ನಾವು ಹಗೆಗಳಿಗೆ ಬೆನ್ನುಕೊಟ್ಟು ಓಡಿಹೋಗುವಂತೆ ಮಾಡಿದಿ; ನಮ್ಮ ವೈರಿಗಳು ತಮಗೋಸ್ಕರ ಬೇಕಾದ ಹಾಗೆ ಕೊಳ್ಳೆಹೊಡೆಯುತ್ತಾರೆ. 11 ತಿನ್ನತಕ್ಕ ಕುರಿಗಳನ್ನೋ ಎಂಬಂತೆ ನಮ್ಮನ್ನು ವಂಚಕರಿಗೆ ಒಪ್ಪಿಸಿದಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀ. 12 ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ, ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ. 13 ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದಿ; ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ, ಕುಚೋದ್ಯಕ್ಕೂ ಒಳಪಡಿಸಿದಿ. 14 ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದಮಾಡಿದಿ; ಅವರು ನಮ್ಮನ್ನು ನೋಡಿ ತಲೆಯಾಡಿಸುತ್ತಾರೆ. 15 ದೂಷಕರ ನಿಂದಾವಚನಗಳಿಂದಲೂ, ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ, 16 ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ. 17 ನಾವು ನಿನ್ನನ್ನು ಮರೆಯದೆಯೂ, ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ; ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ! 18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ದಾರಿಯಿಂದ ತೊಲಗಲಿಲ್ಲ. 19 ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ? 20 ನಾವು ನಮ್ಮ ದೇವರ ಹೆಸರನ್ನು ಮರೆತು, ಅನ್ಯದೇವತೆಗಳಿಗೆ ಕೈಯೆತ್ತಿದ್ದರೆ, 21 ಹೃದಯದ ರಹಸ್ಯಗಳನ್ನು ಬಲ್ಲವನಾದ ದೇವರು, ವಿಚಾರಿಸುತ್ತಿರಲಿಲ್ಲವೋ? 22 ದೇವರೇ, ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ. 23 ಕರ್ತನೇ, ಏಕೆ ನಿದ್ರಿಸುತ್ತೀ? ಎಚ್ಚರವಾಗು; ಏಳು, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡ. 24 ಏಕೆ ವಿಮುಖನಾಗಿದ್ದಿ? ನಮಗಿರುವ ಬಾಧೆಗಳನ್ನೂ, ಹಿಂಸೆಗಳನ್ನೂ ಏಕೆ ಲಕ್ಷಿಸುವುದಿಲ್ಲ? 25 ನಮ್ಮ ಪ್ರಾಣವು ಧೂಳಿನವರೆಗೂ ಬಗ್ಗಿಹೋಗಿದೆ; ನಮ್ಮ ಶರೀರವು ನೆಲಕ್ಕೆ ಅಂಟಿಕೊಂಡಿದೆ. 26 ಎದ್ದು ಬಂದು ಸಹಾಯಮಾಡು; ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಗಾಗಿ ನಮ್ಮನ್ನು ವಿಮೋಚಿಸು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.