ಕೀರ್ತನೆಗಳು 38 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದುರವಸ್ಥೆಯಲ್ಲಿರುವ ಭಕ್ತನು ದೇವರ ಸಹಾಯವನ್ನು ಬೇಡಿಕೊಳ್ಳುವುದು ಕೀರ್ತ 6 ; ಪ್ರಲಾ 3 ; ಯಾಜ 2:2 ; 6:15 ; 24:7 , 8 ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. 1 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ. 2 ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ. 3 ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ. 4 ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ. 5 ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ. 6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ. 7 ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ. 8 ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ. 9 ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ. 10 ನನ್ನ ಹೃದಯವು ಬಡಿದುಕೊಳ್ಳುತ್ತಿದೆ; ನನ್ನ ಚೈತನ್ಯವು ಕುಗ್ಗಿಹೋಯಿತು; ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು. 11 ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ. 12 ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು, ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ. 13 ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; ಮೂಕನಂತೆ ಬಾಯಿ ತೆರೆಯುವುದೇ ಇಲ್ಲ. 14 ನಾನು ಕಿವಿ ಕೇಳಿಸದವನಂತೆಯೂ, ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು. 15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು. 16 “ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು. 17 ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವಿದೆ. 18 ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ; ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು. 19 ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ. 20 ನಾನು ಒಳ್ಳೆಯದನ್ನು ಅನುಸರಿಸುವುದರಿಂದ, ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು. 21 ಯೆಹೋವನೇ, ಕೈ ಬಿಡಬೇಡ; ನನ್ನ ದೇವರೇ, ದೂರವಾಗಿರಬೇಡ. 22 ನನ್ನ ಕರ್ತನೇ, ನನ್ನ ರಕ್ಷಕನೇ, ಬೇಗ ಬಂದು ಸಹಾಯಮಾಡು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.