ಕೀರ್ತನೆಗಳು 36 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದುಷ್ಟರ ದುರ್ಲಕ್ಷಣ ಮತ್ತು ದೇವರ ಮಹಾಪ್ರೀತಿ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ. 1 ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ. 2 ಅದು ಅವನನ್ನು ವಂಚಿಸಿ, “ನಿನ್ನ ದ್ರೋಹವು ಬೈಲಿಗೆ ಬರುವುದಿಲ್ಲ ಮತ್ತು ನಿನಗೆ ಕೇಡು ತರುವುದಿಲ್ಲ” ಎಂದು ಊದಿಬಿಡುತ್ತದೆ. 3 ಅವನ ಬಾಯಿಂದ ಕೆಡುಕೂ, ವಂಚನೆಯೂ ಬರುತ್ತವೆ; ವಿವೇಕಮಾರ್ಗವನ್ನೂ, ಪರಹಿತವನ್ನೂ ಬಿಟ್ಟೇಬಿಟ್ಟಿದ್ದಾನೆ. 4 ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು; ದುಷ್ಟ ಮಾರ್ಗದಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವುದಿಲ್ಲ. 5 ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ; ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ. 6 ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ, ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ; ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ. 7 ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು; ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ. 8 ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ; ನಿನ್ನ ಸಂಭ್ರಮಪ್ರವಾಹದಲ್ಲಿ ಅವರಿಗೆ ಪಾನಮಾಡಿಸುತ್ತೀ. 9 ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ. 10 ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು; ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು. 11 ಗರ್ವಿಷ್ಠರ ಕಾಲಕೆಳಗೆ ನಮ್ಮನ್ನು ಬೀಳಿಸಬೇಡ; ದುರ್ಜನರಿಂದ ನಾವು ದೇಶಭ್ರಷ್ಟರಾಗದಂತೆ ಮಾಡು. 12 ಇಗೋ, ಕೆಡುಕರು ಕೆಡವಲ್ಪಟ್ಟು ಏಳಲಾರದೆ ಬಿದ್ದಿದ್ದಾರೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.