Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ರಕ್ಷಕನನ್ನು ಕೀರ್ತಿಸುವ ಭಕ್ತ

1 ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ; ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ.

2 ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ; ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ಸಂಕೀರ್ತಿಸಿರಿ.

3 ಆತನ ಘನಕ್ಕಾಗಿ ನೂತನ ಕೀರ್ತನೆಯನ್ನು ಹಾಡಿರಿ; ಉತ್ಸಾಹಧ್ವನಿಯೊಡನೆ ಇಂಪಾಗಿ ಬಾರಿಸಿರಿ.

4 ಯೆಹೋವನ ವಚನವು ಯಥಾರ್ಥವಾದದ್ದು; ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ.

5 ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು; ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ.

6 ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.

7 ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ; ಭೂಮಿಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ.

8 ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ; ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ.

9 ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು; ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು.

10 ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ; ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ.

11 ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು; ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ.

12 ಯಾರಿಗೆ ಯೆಹೋವನೇ ದೇವರಾಗಿದ್ದಾನೋ, ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು.

13 ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ;

14 ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ.

15 ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ, ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ.

16 ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ.

17 ಜೀವದ ರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ; ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು.

18 ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ.

19 ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು; ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು.

20 ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ; ನಮ್ಮ ಸಹಾಯವೂ, ಗುರಾಣಿಯೂ ಆತನೇ.

21 ಆತನಲ್ಲಿ ನಮ್ಮ ಹೃದಯವು ಸಂತೋಷಿಸುವುದು; ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ.

22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ; ನಿನ್ನ ಕೃಪೆಯು ನಮ್ಮ ಮೇಲೆ ಇರಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು