ಕೀರ್ತನೆಗಳು 29 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಮೇಘಮಂಡಲದಲ್ಲಿ ಕಾಣಿಸುವ ಯೆಹೋವನ ಮಹಿಮೆ ಯೆರೆ 10:13 ; ಯೆಶಾ 30:30 ದಾವೀದನ ಕೀರ್ತನೆ. 1 ದೇವದೂತರುಗಳಿರಾ, ಪರಮಪ್ರಭಾವವು, ಯೆಹೋವನದೇ, ಯೆಹೋವನದೇ ಎಂದು ಹೇಳಿ ಕೊಂಡಾಡಿರಿ. 2 ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ. 3 ಯೆಹೋವನ ಮಹಾಧ್ವನಿಯು ಮೇಘಮಂಡಲದಲ್ಲಿ ಕೇಳಿಸುತ್ತದೆ; ಪ್ರಭಾವಸ್ವರೂಪನಾದ ದೇವರು ಗುಡುಗುತ್ತಾನೆ; ಯೆಹೋವನು ಆಕಾಶದ ಜಲರಾಶಿಗಳ ಮೇಲೆ ಇದ್ದಾನೆ. 4 ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು, ಎಷ್ಟೋ ಗಂಭೀರವಾದದ್ದು. 5 ಯೆಹೋವನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ; ಯೆಹೋವನು ಲೆಬನೋನ್ ಪರ್ವತದಲ್ಲಿನ ಮಹಾದೇವದಾರುಗಳನ್ನೂ ಮುರಿದುಬಿಡುತ್ತಾನೆ. 6 ಲೆಬನೋನ್ ಪರ್ವತವು ಕರುವಿನೋಪಾದಿಯಲ್ಲಿಯೂ, ಸಿರ್ಯೋನ್ ಬೆಟ್ಟವು ಕಾಡುಕೋಣದ ಮರಿಯಂತೆಯೂ ಹಾರಾಡುವ ಹಾಗೆ ಮಾಡುತ್ತಾನೆ. 7 ಯೆಹೋವನ ಗರ್ಜನೆಗೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ. 8 ಯೆಹೋವನ ಗರ್ಜನೆಗೆ ಕಾಡು ಹೊರಳಾಡುತ್ತದೆ; ಕಾದೇಶ್ ಅರಣ್ಯವು ಕಂಪಿಸುತ್ತದೆ. 9 ಯೆಹೋವನ ಗರ್ಜನೆಯು ದೇವದಾರು ಮರಗಳನ್ನು ಕದಲಿಸುತ್ತದೆ; ಕಾಡಿನ ಮರಗಳು ಬರಿದಾಗುತ್ತವೆ. ಆಗ ಆತನ ಮಂದಿರದಲ್ಲಿರುವವರೆಲ್ಲರು, “ಎಷ್ಟೋ ಪ್ರಭಾವ!” ಎನ್ನುತ್ತಾರೆ. 10 ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು; ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು. 11 ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.