ಕೀರ್ತನೆಗಳು 27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಗಂಡಾಂತರದಲ್ಲಿ ಭಕ್ತನ ನಂಬಿಕೆ ದಾವೀದನ ಕೀರ್ತನೆ. 1 ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೆನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? 2 ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು ನನ್ನನ್ನು ನುಂಗಿಬಿಡಬೇಕೆಂದು ಬಂದು, ತಾವೇ ನೆಲಕ್ಕೆ ಬಿದ್ದುಹೋದರು. 3 ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ; ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ, ಭರವಸವುಳ್ಳವನಾಗಿಯೇ ಇರುವೆನು. 4 ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು. 5 ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು. 6 ಹೀಗಿರುವುದರಿಂದ ನನ್ನ ಸುತ್ತಲಿರುವ ವೈರಿಗಳ ಮೇಲೆ, ನನ್ನ ತಲೆ ಎತ್ತಲ್ಪಟ್ಟಿರುವುದು; ನಾನು ಯೆಹೋವನ ಗುಡಾರದಲ್ಲಿ, ಉತ್ಸಾಹಧ್ವನಿಯೊಡನೆ ಯಜ್ಞಗಳನ್ನು ಸಮರ್ಪಿಸುವೆನು. ಆತನನ್ನು ಹಾಡುತ್ತಾ ವಾದ್ಯಬಾರಿಸುವೆನು. 7 ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆಯಿಡುತ್ತೇನೆ; ನನ್ನನ್ನು ಕರುಣಿಸಿ, ಸದುತ್ತರವನ್ನು ದಯಪಾಲಿಸು. 8 “ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ, ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು. 9 ನನಗೆ ವಿಮುಖನಾಗಿರಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ. ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ; ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ. 10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು. 11 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡೆಸು. 12 ಸುಳ್ಳುಸಾಕ್ಷಿಗಳೂ ಬೆದರಿಸುವವರೂ ನನಗೆ ವಿರುದ್ಧವಾಗಿ ಎದ್ದಿದ್ದಾರೆ; ಇಂಥ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡ. 13 ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ. 14 ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.