Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಘೋರಬಾಧೆಪಟ್ಟ ಭಕ್ತನ ಮನಃಪೂರ್ವಕ ಪ್ರಾರ್ಥನೆ
ಕೀರ್ತ 69 ; 71 ; 102 ; ಯೆಶಾ 55
(ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಉದಯದ ಜಿಂಕೆ ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.)

1 ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?

2 ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ; ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.

3 ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ, ನೀನು ಪವಿತ್ರಸ್ವರೂಪನು.

4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು.

5 ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.

6 ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.

7 ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ; ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ,

8 “ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ; ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ.

9 ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ. ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ.

10 ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.

11 ನನಗೀಗ ಕಷ್ಟವು ಪ್ರಾಪ್ತವಾಗಿದೆ; ಸಹಾಯಕರು ಯಾರೂ ಇಲ್ಲ, ದೂರವಾಗಿರಬೇಡ.

12 ಬಹಳ ಗೂಳಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವುಳ್ಳ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.

13 ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವುದಕ್ಕೆ ಬಾಯಿ ತೆರೆದಿದ್ದಾರೆ.

14 ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿದೆ. ನನ್ನ ಹೃದಯ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.

15 ನನ್ನ ಶಕ್ತಿಯು ಬೋಕಿಯ ಹಾಗೆ ಒಣಗಿಹೋಗಿದೆ; ನನ್ನ ನಾಲಿಗೆಯು ಬಾಯಿಯ ಅಂಗಳಕ್ಕೆ ಹತ್ತಿಹೋಗಿದೆ. ನೀನು ನನ್ನನ್ನು ಮಣ್ಣಿಗೆ ಸೇರಿಸುತ್ತೀ.

16 ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ.

17 ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು; ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ.

18 ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ.

19 ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ; ಬೇಗ ಬಂದು ಸಹಾಯಮಾಡು.

20 ಕತ್ತಿಗೆ ಸಿಕ್ಕದಂತೆ ನನ್ನನ್ನು ತಪ್ಪಿಸು; ನನ್ನ ಪ್ರಿಯ ಪ್ರಾಣವು ನಾಯಿಯ ವಶವಾಗದಂತೆ ಕಾಪಾಡು.

21 ಸಿಂಹಗಳ ಬಾಯಿಂದ ರಕ್ಷಿಸು, ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸು.

22 ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.

23 ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ; ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ. ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.

24 ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ, ಅವನ ಪ್ರಾರ್ಥನೆಗೆ ಕಿವಿಗೊಟ್ಟನು.

25 ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು; ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.

26 ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.

27 ಭೂಮಂಡಲದವರೆಲ್ಲರೂ ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಯೆಹೋವನೇ, ಎಲ್ಲಾ ಜನಾಂಗಗಳವರು ನಿನಗೆ ಅಡ್ಡಬೀಳುವರು.

28 ರಾಜ್ಯವು ಯೆಹೋವನದೇ; ಎಲ್ಲಾ ಜನಾಂಗಗಳಿಗೂ ಆತನೇ ಒಡೆಯನು.

29 ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.

30 ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡವರು.

31 ಅವರು ಬಂದು ಆತನ ನೀತಿಯನ್ನೂ, ಆತನು ನಡೆಸಿದ ಕಾರ್ಯಗಳನ್ನೂ ಮುಂದೆ ಹುಟ್ಟುವ ಜನಕ್ಕೆ ತಿಳಿಸುವರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು