ಕೀರ್ತನೆಗಳು 20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅರಸನ ಜಯಕ್ಕಾಗಿ ಪ್ರಾರ್ಥಿಸುವುದು ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. 1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ. 2 ಆತನು ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ. 3 ನೀನು ಸಮರ್ಪಿಸಿದ ನೈವೇದ್ಯಗಳು ಆತನ ನೆನಪಿಗೆ ಬರಲಿ; ನೀನು ಮಾಡಿದ ಸರ್ವಾಂಗಹೋಮಗಳು ಆತನಿಗೆ ಮೆಚ್ಚಿಕೆಯಾಗಲಿ. ಸೆಲಾ 4 ಆತನು ನಿನ್ನ ಇಷ್ಟಾರ್ಥವನ್ನು ನೆರವೇರಿಸಲಿ; ನಿನ್ನ ಎಲ್ಲಾ ಸಂಕಲ್ಪಗಳನ್ನು ಸಫಲಮಾಡಲಿ. 5 ನಿನ್ನ ಜಯದಲ್ಲಿ ಉತ್ಸಾಹಧ್ವನಿ ಮಾಡುವೆವು; ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು. ಯೆಹೋವನು ನಿನ್ನ ಎಲ್ಲಾ ವಿಜ್ಞಾಪನೆಗಳನ್ನು ನೆರವೇರಿಸಲಿ. 6 ಯೆಹೋವನು ತಾನು ಅಭಿಷೇಕಿಸಿದ ಅರಸನಿಗೆ ಜಯವನ್ನು ಅನುಗ್ರಹಿಸುವನೆಂದು ಈಗ ನನಗೆ ಗೊತ್ತಾಯಿತು. ಆತನು ತನ್ನ ಪವಿತ್ರ ಲೋಕದಿಂದ ಅವನ ಪ್ರಾರ್ಥನೆಗೆ ಸದುತ್ತರವನ್ನು ಕೊಡುವನು, ತನ್ನ ಭುಜಬಲದಿಂದ ಅವನಿಗೆ ವಿಜಯವನ್ನು ಉಂಟುಮಾಡುವನು. 7 ಕೆಲವರು ರಥಬಲದಲ್ಲಿ, ಕೆಲವರು ಅಶ್ವಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ ಹೆಚ್ಚಳಪಡುತ್ತೇವೆ. 8 ಅವರು ಬಿದ್ದುಹೋಗಿದ್ದಾರೆ; ನಾವಾದರೋ ಎದ್ದು ನಿಂತಿದ್ದೇವೆ. 9 ಯೆಹೋವನೇ, ನಮ್ಮ ಅರಸನಿಗೆ ಜಯವನ್ನುಂಟುಮಾಡು; ನಾವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.