ಕೀರ್ತನೆಗಳು 146 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನನ್ನು ಆಶ್ರಯಿಸಿಕೊಂಡವನು ಧನ್ಯನು 1 ಯೆಹೋವನಿಗೆ ಸ್ತೋತ್ರ! ನನ್ನ ಮನವೇ, ಯೆಹೋವನನ್ನು ಸ್ತುತಿಸು. 2 ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು, ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು. 3 ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ, ಅವರು ಸಹಾಯ ಮಾಡ ಶಕ್ತರಲ್ಲ, 4 ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ, ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು. 5 ಯಾರಿಗೆ ಯಾಕೋಬನ ದೇವರು ಸಹಾಯಕನೋ, ಯಾರು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ, ಅವನೇ ಧನ್ಯನು. 6 ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ, ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ, 7 ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ, ಹಸಿದವರಿಗೆ ಆಹಾರ ಕೊಡುವವನೂ ಆತನೇ. ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ. 8 ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ. ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ. ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ. 9 ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ. 10 ಯೆಹೋವನು ಸದಾಕಾಲವೂ ಅರಸನಾಗಿರುವನು, ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು, ಯೆಹೋವನಿಗೆ ಸ್ತೋತ್ರ! |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.