ಕೀರ್ತನೆಗಳು 144 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಜಯದ ಗೀತೆ, ಸೌಭಾಗ್ಯದ ನಿರೀಕ್ಷೆ ಕೀರ್ತ 18 ; ಧರ್ಮೋ 33:26-29 ದಾವೀದನ ಕೀರ್ತನೆ. 1 ನನ್ನ ಶರಣನಾದ ಯೆಹೋವನಿಗೆ ಕೊಂಡಾಟವಾಗಲಿ. ಆತನು ನನ್ನ ಕೈಗಳಿಗೆ ಯುದ್ಧವಿದ್ಯೆಯನ್ನು, ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ. 2 ನನ್ನ ಪ್ರೀತಿಯು, ನನ್ನ ಕೋಟೆಯು, ನನ್ನ ದುರ್ಗವು, ನನ್ನ ರಕ್ಷಕನು, ನನ್ನ ಗುರಾಣಿಯು, ಆಶ್ರಯವು, ಜನಾಂಗಗಳನ್ನು ನನಗೆ ಅಧೀನಮಾಡಿದವನೂ ಆತನೇ. 3 ಯೆಹೋವನೇ, ಮನುಷ್ಯನು ಎಷ್ಟು ಮಾತ್ರದವನು? ಅವನನ್ನು ನೀನು ಏಕೆ ನೆನಸಬೇಕು? ಮಾನವನು ಎಷ್ಟರವನು? ಅವನಲ್ಲಿ ಏಕೆ ಲಕ್ಷ್ಯವಿಡಬೇಕು? 4 ಮನುಷ್ಯನು ಬರೀ ಉಸಿರೇ, ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ. 5 ಯೆಹೋವನೇ, ಆಕಾಶವನ್ನು ತಗ್ಗಿಸಿ ಇಳಿದು ಬಾ, ಪರ್ವತಗಳನ್ನು ಮುಟ್ಟು, ಆಗ ಅವು ಹೊಗೆಹಾಯುವವು. 6 ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು, ನಿನ್ನ ಬಾಣಗಳಿಂದ ಅವರನ್ನು ಭ್ರಾಂತಿಗೊಳಿಸು. 7 ಮೇಲಣ ಲೋಕದಿಂದ ಕೈಚಾಚಿ, ಮಹಾ ಜಲರಾಶಿಯೊಳಗಿಂದ ನನ್ನನ್ನು ಎಳೆದುಕೋ. 8 ಕಪಟವಚನದವರೂ, ಬಲಗೈಯೆತ್ತಿ ಸುಳ್ಳಾಣೆಯಿಡುವವರೂ ಆಗಿರುವ ಅನ್ಯಜನಗಳ ಕೈಯಿಂದ ನನ್ನನ್ನು ಬಿಡಿಸು. 9 ದೇವರೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು, ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು. 10 ಅರಸುಗಳಿಗೆ ಜಯಪ್ರದನೂ, ಸೇವಕನಾದ ದಾವೀದನನ್ನು ಹಾನಿಕರವಾದ ಕತ್ತಿಗೆ ತಪ್ಪಿಸಿದವನೂ ನೀನೇ. 11 ಕಪಟವಚನದವರೂ, ಬಲಗೈಯೆತ್ತಿ ಸುಳ್ಳಾಣೆ ಇಡುವವರೂ ಆಗಿರುವ ಅನ್ಯಜನಗಳ ಕೈಯಿಂದ ನನ್ನನ್ನು ಬಿಡಿಸಿ ಕಾಪಾಡು. 12 ಯೌವನಸ್ಥರಾದ ನಮ್ಮ ಗಂಡುಮಕ್ಕಳು ಸಮೃದ್ಧಿಯಾಗಿ ಬೆಳದಿರುವ ಸಸಿಗಳಂತಿರುವರು, ಹೆಣ್ಣುಮಕ್ಕಳು ಅರಮನೆಯಲ್ಲಿ ಕೆತ್ತಿದ ಮೂಲೆಗಂಬದಂತೆ ಇರುವರು. 13 ನಮ್ಮ ಕಣಜಗಳು ಸಕಲವಿಧವಾದ ಧಾನ್ಯಗಳಿಂದ ತುಂಬಿರುವವು, ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುವವು. 14 ನಮ್ಮ ಪಶುಗಳು ಅಸಂಖ್ಯಾತವಾಗಲಿ, ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಒಯ್ಯುವುದಾಗಲಿ ಇರುವುದಿಲ್ಲ, ಬೀದಿಗಳಲ್ಲಿ ಗೋಳಾಟವು ಕೇಳಿಸುವುದಿಲ್ಲ. 15 ಇಂಥ ಸುಸ್ಥಿತಿಯಲ್ಲಿರುವ ಜನರು ಧನ್ಯರು, ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.