ಕೀರ್ತನೆಗಳು 132 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದಾವೀದನ ಮನೆತನವನ್ನು ಪುನಃಸ್ಥಾಪಿಸಬೇಕೆಂಬ ಪ್ರಾರ್ಥನೆ ಕೀರ್ತ 89 ; 2ಸಮು 7 ಯಾತ್ರಾಗೀತೆ. 1 ಯೆಹೋವನೇ, ದಾವೀದನ ಹಿತಕ್ಕೋಸ್ಕರ, ಅವನ ಶ್ರಮೆಗಳನ್ನು ನೆನಪುಮಾಡಿಕೋ. 2 ಯಾಕೋಬನ ಶೂರನಾದ ಯೆಹೋವನಿಗಾಗಿ ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ, 3 “ನಾನು ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ, ಮಂಚವನ್ನು ಹತ್ತುವುದಿಲ್ಲ, 4 ಕಣ್ಣುಗಳನ್ನು ಮುಚ್ಚುವುದಿಲ್ಲ, ರೆಪ್ಪೆಗಳನ್ನು ಕೂಡಿಸುವುದಿಲ್ಲ” ಎಂದು 5 ಅವನು ಯೆಹೋವನಿಗೆ ಪ್ರಮಾಣಮಾಡಿ, ಯಾಕೋಬನ ಶೂರನಿಗೆ ಹರಕೆ ಮಾಡಿಕೊಂಡನಲ್ಲಾ. 6 ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು; ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು. 7 “ಬನ್ನಿರಿ, ಆತನ ಮಂದಿರಕ್ಕೆ ಹೋಗಿ ಆತನ ಪಾದಪೀಠದ ಮುಂದೆ ಅಡ್ಡಬೀಳೋಣ!” 8 ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ, ನಿನ್ನ ವಾಸಸ್ಥಾನಕ್ಕೆ ಬಂದು ನೆಲೆಸು. 9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ; ನಿನ್ನ ಭಕ್ತರು ಉತ್ಸಾಹಧ್ವನಿ ಮಾಡಲಿ. 10 ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ; ನೀನು ಅಭಿಷೇಕಿಸಿದವನನ್ನು ತಳ್ಳಿಬಿಡಬೇಡ. 11 ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ; ಆತನು ಅದನ್ನು ಬದಲಿಸುವುದಿಲ್ಲ. “ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು; 12 ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ, ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ, ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು.” 13 ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ, ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ. 14 ಆತನು, “ಇದು ನನ್ನ ಶಾಶ್ವತ ವಾಸಸ್ಥಾನ; ಇಲ್ಲೇ ಇರುವೆನು; ಇದು ನನಗೆ ಇಷ್ಟ. 15 ಇದರ ಆದಾಯವನ್ನು ಆಶೀರ್ವದಿಸುವೆನು; ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು; 16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು; ಭಕ್ತರು ಉತ್ಸಾಹಧ್ವನಿ ಮಾಡುವರು. 17 ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ. 18 ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು; ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.