Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 106 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೋವನ ಕ್ಷಮಾಯಾಚನೆ
ಕೀರ್ತ 78 ; 105

1 ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

2 ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು?

3 ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು.

4 ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,

5 ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.

6 ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು.

7 ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.

8 ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು.

9 ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.

10 ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಯ ಹಸ್ತದಿಂದ ಬಿಡಿಸಿದನು.

11 ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.

12 ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು.

13 ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, ಆತನ ನಡೆಸುವಿಕೆಗೆ ಕಾದಿರದೆ,

14 ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.

15 ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.

16 ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು,

17 ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.

18 ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.

19 ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.

20 ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು.

21 ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ,

22 ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು.

23 ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

24 ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, ಆತನ ಮಾತನ್ನು ನಂಬಲಿಲ್ಲ.

25 ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.

26 ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,

27 ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.

28 ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು.

29 ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.

30 ಫೀನೆಹಾಸನು ಎದ್ದು ಅವರನ್ನು ದಂಡಿಸಲು, ಆ ವ್ಯಾಧಿಯು ನಿಂತುಹೋಯಿತು.

31 ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.

32 ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು.

33 ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, ಮೋಶೆ ದುಡುಕಿ ಮಾತನಾಡಿದನು.

34 ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ,

35 ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು.

36 ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.

37 ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.

38 ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.

39 ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.

40 ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,

41 ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು;

42 ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.

43 ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.

44 ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.

45 ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.

46 ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು.

47 ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.

48 ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು