ಎಸ್ತೇರಳು 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಎಸ್ತೇರಳು ಅರಸನನ್ನೂ ಹಾಮಾನನ್ನೂ ಔತಣಕ್ಕೆ ಆಹ್ವಾನಿಸಿದ್ದು 1 ಮೂರನೆಯ ದಿನದಲ್ಲಿ ಎಸ್ತೇರಳು ರಾಜವಸ್ತ್ರಭೂಷಿತಳಾಗಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ, ರಾಜಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದಲ್ಲಿ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತುಕೊಂಡಿದ್ದನು. 2 ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು. 3 ಎಸ್ತೇರಳು ಅರಸನ ಸಮೀಪಕ್ಕೆ ಹೋಗಿ ದಂಡದ ತುದಿಯನ್ನು ಮುಟ್ಟಿದಳು. ಆಗ ಅರಸನು ಆಕೆಗೆ, “ಎಸ್ತೇರ್ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವುದು? ನನ್ನ ಅರ್ಧರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ” ಅಂದನು. 4 ಅದಕ್ಕೆ ಎಸ್ತೇರಳು, “ಅರಸನು ಒಪ್ಪುವುದಾದರೆ ನಾನು ಈಹೊತ್ತು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ಹಾಮಾನನೊಡನೆ ಬರೋಣವಾಗಲಿ” ಎಂದು ಅರಿಕೆಮಾಡಿದಳು. 5 ಕೂಡಲೆ ಅರಸನು, “ಎಸ್ತೇರಳ ವಿಜ್ಞಾಪನೆಯನ್ನು ನೆರವೇರಿಸುವುದಕ್ಕೆ ಹಾಮಾನನನ್ನು ಕರೆದುಕೊಂಡು ಬನ್ನಿರಿ” ಎಂದು ಅಪ್ಪಣೆಮಾಡಿ ಎಸ್ತೇರಳು ಮಾಡಿಸಿದ್ದ ಔತಣಕ್ಕೆ ಹಾಮಾನನ ಜೊತೆಯಲ್ಲಿ ಹೋದನು. 6 ದ್ರಾಕ್ಷಾರಸ ಪಾನಮಾಡುವಾಗ ಅರಸನು ತಿರುಗಿ ಎಸ್ತೇರಳಿಗೆ, “ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಅಂದನು. 7 ಅದಕ್ಕೆ ಎಸ್ತೇರಳು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ನಾನು ಕೇಳುವುದನ್ನು ಕೊಡುವುದಕ್ಕೂ ನನ್ನ ವಿಜ್ಞಾಪನೆಯನ್ನು ನೆರವೇರಿಸುವುದಕ್ಕೂ ಮನಸ್ಸುಳ್ಳವರಾಗಿದ್ದರೆ 8 ನಾನು ತಮಗೋಸ್ಕರ ಸಿದ್ಧಮಾಡಿಸುವ ಔತಣಕ್ಕೆ ನಾಳೆಯೂ ಹಾಮಾನನ ಜೊತೆಯಲ್ಲಿ ಬರೋಣವಾಗಲಿ; ಆಗ ಅರಸರು ಹೇಳಿದಂತೆ ಮಾಡುವೆನು. ಇದೇ ನನ್ನ ಮನವಿ” ಎಂದು ಉತ್ತರಕೊಟ್ಟಳು. ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿದ ಹಾಮಾನ 9 ಆ ದಿನ ಹಾಮಾನನು ಆನಂದಲಹರಿಯಲ್ಲಿ ಮನೆಗೆ ಹೋಗುತ್ತಿರುವಾಗ ಮೊರ್ದೆಕೈಯು ತನಗೆ ಭಯಪಡದೆ, ತನ್ನ ಮುಂದೆ ಏಳದೆ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತಿರುವುದನ್ನು ಕಂಡು ಅವನ ಮೇಲೆ ಕೋಪಭರಿತನಾದನು. 10 ಆದರೂ ತನ್ನ ಕೋಪವನ್ನು ಬಿಗಿಹಿಡಿದುಕೊಂಡು ಮನೆಗೆ ಹೋಗಿ ತನ್ನ ಆಪ್ತರನ್ನೂ, ಪತ್ನಿಯಾದ ಜೆರೆಷಳನ್ನೂ ಕರೆದನು. 11 ಅವರ ಮುಂದೆ ತನ್ನ ಘನೈಶ್ವರ್ಯಗಳನ್ನೂ, ಪುತ್ರಲಾಭಾತಿಶಯವನ್ನೂ, ಅರಸನು ತನ್ನನ್ನು ಸನ್ಮಾನಿಸಿ ಎಲ್ಲಾ ಸರದಾರರಿಗಿಂತ, ರಾಜಸೇವಕರಿಗಿಂತ ತನಗೇ ಶ್ರೇಷ್ಠಸ್ಥಾನವನ್ನು ಅನುಗ್ರಹಿಸಿದ್ದನ್ನೂ ವರ್ಣಿಸಿ, 12 “ಇದಲ್ಲದೆ ಎಸ್ತೇರ್ ರಾಣಿಯು ತಾನು ಸಿದ್ಧಮಾಡಿಸಿದ ಔತಣಕ್ಕೆ ಅರಸನ ಜೊತೆಯಲ್ಲಿ ನನ್ನ ಹೊರತಾಗಿ ಇನ್ನಾರನ್ನೂ ಆಹ್ವಾನಿಸಲಿಲ್ಲ. ನಾಳೆಯೂ ಅರಸನ ಜೊತೆಯಲ್ಲಿ ಬರಬೇಕೆಂದು ನನಗೆ ಹೇಳಿದ್ದಾಳೆ. 13 ಆದರೂ ಮೊರ್ದೆಕೈ ಎಂಬ ಯೆಹೂದ್ಯನು ಅರಮನೆಯ ಬಾಗಿಲಿನಲ್ಲಿ ನನ್ನ ಕಣ್ಣ ಮುಂದೆ ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಅಂದನು. 14 ಅದಕ್ಕೆ ಅವನ ಪತ್ನಿಯಾದ ಜೆರೆಷಳೂ ಅವನ ಎಲ್ಲಾ ಆಪ್ತರೂ, “ಐವತ್ತು ಮೊಳ ಎತ್ತರವಾದ ಒಂದು ಗಲ್ಲುಗಂಬವನ್ನು ಸಿದ್ಧಮಾಡಿಸಿ ನಾಳೆ ಅರಸನ ಅಪ್ಪಣೆಯನ್ನು ಪಡೆದುಕೊಂಡು ಮೊರ್ದೆಕೈಯನ್ನು ಅದಕ್ಕೆ ನೇತುಹಾಕಿಸಬೇಕು; ಆ ಮೇಲೆ ನೀನು ಸಂತೋಷದಿಂದ ಅರಸನ ಜೊತೆಯಲ್ಲಿ ಔತಣಕ್ಕೆ ಹೋಗಬಹುದು” ಎಂದು ಹೇಳಿದರು. ಹಾಮಾನನು ಈ ಮಾತಿಗೆ ಮೆಚ್ಚಿ ಗಲ್ಲುಗಂಬವನ್ನು ಸಿದ್ಧಮಾಡಿಸಿದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.